ಇಂದೋರ್: ಪತಿ- ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿ, ತಾರಕ್ಕಕ್ಕೇರುತ್ತಿದ್ದಂತೆ ಹೆಂಡತಿ ಮೂರನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. 30 ವರ್ಷದ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಮನೆಯ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಮೂರನೇ ಮಹಡಿಯಿಂದ ಜಿಗಿದಿರುವುದು ಕೂಡ ಸೆರೆಯಾಗಿದೆ.
ಎರಡು ಮಕ್ಕಳ ತಾಯಿಯಾಗಿರುವ ಅಂಗೂರಿ ತನ್ನ ಪತಿ ರಾಹುಲ್ ಜೊತೆ ಜಗಳವಾಡಿದ ನಂತರ ಲಾಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರ ಟೌನ್ ಶಿಪ್ ನಲ್ಲಿರುವ ಮನೆಯ ಮೂರನೇ ಮಹಡಿಯಲ್ಲಿರುವ ನೀರಿನ ಟ್ಯಾಂಕ್ ಹತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪತಿ ಹಾಗೂ ಅಲ್ಲಿದ್ದವರು ಕೆಳಗೆ ಇಳಿಯುವಂತೆ ಎಷ್ಟು ಹೇಳಿದರೂ ಅವರು ಕೇಳಿಲ್ಲ. ಅಷ್ಟರಲ್ಲಿ ಮೇಲಿಂದ ಹಾರಿ ಬಿದ್ದಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.