ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣದ ಆಘಾತಕಾರಿ ವಿಚಾಋ ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವಾಗ, ಈ ಘಟನೆಯಿಂದ ಹೆದರಿದ ಸಂತ ಕಬೀರ್ ನಗರದ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅಸಾಮಾನ್ಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ. ಬಬ್ಲು ಎಂಬ ಈ ವ್ಯಕ್ತಿಯು ತನ್ನ ಪತ್ನಿ ರಾಧಿಕಾಳನ್ನು ಆಕೆಯ ಪ್ರಿಯಕರ ವಿಕಾಸ್ ಜತೆ ಮದುವೆ ಮಾಡಿಸಿದ್ದಾನೆ. ತನ್ನ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದ ಬಬ್ಲು, ಈ ಅಪರೂಪರ ನಿರ್ಧಾರ ಕೈಗೊಂಡಿದ್ದಾನ.
ಬಬ್ಲು ಮತ್ತು ರಾಧಿಕಾ 2017 ರಲ್ಲಿ ಮದುವೆಯಾಗಿದ್ದರು ಮತ್ತು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಬ್ಲು ಇತರ ರಾಜ್ಯದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ರಾಧಿಕಾ ತನ್ನ ಗ್ರಾಮದ ವಿಕಾಸ್ ಎಂಬಾತನೊಂದಿಗೆ ಕಳೆದ 18 ತಿಂಗಳಿಂದ ಅಕ್ರಮ ಸಂಬಂಧದಲ್ಲಿದ್ದಾಳೆ ಎಂಬ ಮಾಹಿತಿ ಬಬ್ಲುಗೆ ತಿಳಿದಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಬಬ್ಲು ರಾಧಿಕಾಗೆ ತಿಳಿಸದೇ ಗ್ರಾಮಕ್ಕೆ ಮರಳಿದ್ದ ಹಾಗೂ ಆಕೆಯ ಚಟುವಟಿಕೆಗಳನ್ನು ಗಮನಿಸಿದ್ದ. ತನ್ನ ಶಂಕೆ ಸತ್ಯವೆಂದು ದೃಢಪಟ್ಟಾಗ, ಬಬ್ಲು ರಾಧಿಕಾ ಜೊತೆ ಜಗಳವಾಡುವ ಬದಲು ಅವರಿಬ್ಬರ ಮದುವೆ ಮಾಡಿಸಲು ಮುಂದಾಗಿದ್ದೇ ಈ ಸ್ಟೋರಿಯ ಟ್ವಿಸ್ಟ್!
ಮೀರತ್‌ನಲ್ಲಿ ಮುಸ್ಕಾನ್ ರಾಸ್ತೋಗಿ ಎಂಬ ಮಹಿಳೆ ತನ್ನ ಪತಿ ಸೌರಭ್ ರಾಜ್‌ಪುತ್‌ನನ್ನು ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಕೊಂದು, ಶವವನ್ನು ಡ್ರಮ್‌ನಲ್ಲಿ ಸಿಮೆಂಟ್ ತುಂಬಿ ಮುಚ್ಚಿದ ಘಟನೆ ಓದಿದ ಬಳಿಕ ಬಬ್ಲು ಆಘಾತಕ್ಕೆ ಒಳಗಾಗಿದ್ದ. ಹೆದರಿದ ಆತ ಹೆಂಡತಿಗೆ ಆತ ಮದುವೆ ಮಾಡಿಸಿದ್ದ. “ಮೀರತ್‌ನಲ್ಲಿ ಏನಾಯಿತು ಎಂಬುದನ್ನು ನೋಡಿದ ನಂತರ, ನನ್ನ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಮದುವೆ ಮಾಡಿದರೆ ನಾವಿಬ್ಬರೂ ಶಾಂತಿಯಿಂದ ಬದುಕಬಹುದು ಎಂದು ನಿರ್ಧರಿಸಿದೆ” ಎಂದು ಬಬ್ಲು ಹೇಳಿದ್ದಾರೆ.
ಜೋರು ಮದುವೆ
ರಾಧಿಕಾ ಮತ್ತು ಪ್ರಿಯಕರ ವಿಕಾಸ್ ಮದುವೆ ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು. ಈ ಮದುವೆಗೆ ಬಬ್ಲು ಸಾಕ್ಷಿ! ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂಬುದೇ ಅಚ್ಚರಿ. ಆದರೆ, ಬಬ್ಲು ಮತ್ತು ರಾಧಿಕಾ ಇನ್ನೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, “ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮದುವೆ ನಡೆದಿದ್ದು, ಯಾರೂ ವಿರೋಧಿಸಿಲ್ಲ. ಹೀಗಾಗಿ ಇದು ಕಾನೂನುಬದ್ಧವಾಗಿದೆ” ಎಂದು ಬಬ್ಲು ಸಮರ್ಥಿಸಿಕೊಂಡಿದ್ದಾರೆ!
ಬಬ್ಲು ತನ್ನ ಇಬ್ಬರು ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ತಾನೇ ತೆಗೆದುಕೊಂಡಿದ್ದಾರೆ. “ನನ್ನ ಮಕ್ಕಳು ನನ್ನ ಜೊತೆ ಇರುತ್ತಾರೆ. ರಾಧಿಕಾ ತನ್ನ ವಿಕಾಸ್ ಜೊತೆ ಜೀವನ ಮುಂದುವರಿಸಲಿ” ಎಂದು ಅವರು ಹೇಳಿದ್ದಾರೆ.
ಮೀರತ್ ಕೊಲೆ ಏನು?
ಮೀರತ್‌ನಲ್ಲಿ ಮಾರ್ಚ್ 4 ರಂದು ಮುಸ್ಕಾನ್ ರಾಸ್ತೋಗಿ ತನ್ನ ಪತಿ ಸೌರಭ್ ರಾಜ್‌ಪುತ್‌ನನ್ನು ಸಾಹಿಲ್ ಶುಕ್ಲಾ ಜೊತೆ ಸೇರಿ ವಿಷ ಮಿಶ್ರಿತ ಆಹಾರ ನೀಡಿ, ಚಾಕುವಿನಿಂದ ಇರಿದು ಕೊಂದಿದ್ದಳು. ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿ, ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಮುಚ್ಚಿದ್ದಳು. ಈ ಘಟನೆಯ ನಂತರ ಇವರಿಬ್ಬರು ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿ, ಹೋಳಿ ಆಚರಿಸಿದ್ದರು. ಈ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿತ್ತು.
ಜನರ ಪ್ರತಿಕ್ರಿಯೆ
ಬಬ್ಲು ತೆಗೆದುಕೊಂಡ ಈ ನಿರ್ಧಾರವು ಸ್ಥಳೀಯರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವರು ಇದನ್ನು “ಪ್ರಾಯೋಗಿಕ ಪರಿಹಾರ” ಎಂದು ಕರೆದರೆ, ಇತರರು ಇದನ್ನು ಸಾಂಪ್ರದಾಯಿಕ ಮದುವೆಯ ಮೌಲ್ಯಗಳಿಗೆ ಧಕ್ಕೆ ಎಂದು ಭಾವಿಸಿದ್ದಾರೆ. “ಬಬ್ಲು ಜಗಳವಾಡದೇ, ಹಿಂಸೆಗೆ ಒಳಗಾಗದೇ ಈ ರೀತಿ ಮಾಡಿದ್ದಾರೆ. ಇದು ಒಳ್ಳೆಯದೇ” ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.