ಬೆಂಗಳೂರು: ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಬೇಸರಗೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆಂದು ಪತ್ನಿಯನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದು ಕೋರಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪ್ರೇಮಾ ಹಾಗೂ ಅಕ್ರಮ ಸಂಬಂಧ ಹೊಂದಿದ್ದ ಬಸವಲಿಂಗೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕ ಸದಸ್ಯ ಪೀಠ ಈ ರೀತಿ ತೀರ್ಪು ಪ್ರಕಟಿಸಿದೆ.
ನಿರ್ದಿಷ್ಟ ಕೆಲಸ ಮಾಡುವಂತೆ ಪ್ರಚೋದಿಸುವುದನ್ನು ಪ್ರಚೋದನೆ ಅಂತಾರೆ. ಅದು ಆಗ ಪ್ರಚೋದನೆಯ ಅಪರಾಧವಾಗುತ್ತದೆ. ಮೇಲ್ಮನವಿ ಸಲ್ಲಿಸಿರುವ ಆರೋಪಿಗಳು ಅಕ್ರಮ ಸಂಬಂಧ ಹೊಂದಿದ್ದಾರೆಯೇ ಹೊರತು, ಪತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ. ಪ್ರಚೋದನೆ ನೀಡುವುದನ್ನು ಸಾಬೀತುಪಡಿಸಲು ನಿಖರ ಸಾಕ್ಷ್ಯಗಳು ಬೇಕಾಗುತ್ತವೆ. ಇಲ್ಲವಾದರೆ ಅಪರಾಧವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣದಲ್ಲಿ ಆರೋಪಿಗಳನ್ನು ಶಿಕ್ಷಿಸಲು ಆಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಅಲ್ಲದೇ, ಪ್ರೇಮಾ ಮತ್ತು ಬಸವಲಿಂಗೇಗೌಡ ಅವರನ್ನು ಅಪರಾಧಿಗಳೆಂದು ತೀರ್ಮಾನಿಸಿ ಇಬ್ಬರಿಗೆ ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷ ಕಠಿಣ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿದೆ.
ಪ್ರೇಮಾ ಅವರ ಪತಿ ಸದಾಶಿವ ಮೂರ್ತಿ ಆತ್ಮಹತ್ಯೆ ಮಾಡಿಕೊಳುವ ಉದ್ದೇಶ ಹೊಂದಿರಲಿಲ್ಲ. ‘ನೀನು ಹೋಗಿ ಸಾಯಿ. ನೀನು ಸತ್ತರೆ ನಾವು ಸಂತೋಷದಿಂದ ಜೀವನ ನಡೆಸುತ್ತೇವೆ ಎಂಬುವುದಾಗಿ ಆರೋಪಿಗಳು ಸದಾಶಿವ ಮೂರ್ತಿಗೆ ನಿಂದಿಸಿದ ಮಾತ್ರಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಸದಾಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯಾಗಿದ್ದರು.