ರಾಯಚೂರು: ಮೈಕ್ರೋ ಫೈನಾನ್ಸ್ (Micro finance) ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ತಮ್ಮ ಮಾಂಗಲ್ಯ ಸರವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಜನರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಹಲವರು ಊರು ಬಿಟ್ಟು ಹೋಗುತ್ತಿದ್ದರು. ಈ ಕಾರಣದಿಂದಾಗಿ ವ್ಯಕ್ತಿಯೊಬ್ಬ ಜ. 17 ರಂದು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಶರಣಬಸವ ಎನ್ನುವ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ಕೊಟ್ಟಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಟಾರ್ಚರ್ ನೀಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಕಣ್ತಪ್ಪಿಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಶರಣಬಸವ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶರಣಬಸವ ಡ್ರೈವಿಂಗ್ ಜೊತೆ ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಕೆಲ ಖಾಸಗಿ ಕಂಪನಿಗಳಿಂದ ಸುಮಾರು 6-8 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲ ಕಂತುಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಶರಣಬಸವ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದಾದ ಬಳಿಕ ಈಗ ಮೃತನ ಕುಟುಂಬ ಇಂದು ಸ್ಥಳೀಯ ಹೋರಾಟಗಾರರ ಜೊತೆಗೆ ಒಗ್ಗೂಡಿ ಹೋರಾಟಕ್ಕಿಳಿದಿದ್ದಾರೆ. ಶರಣಬಸವನ ಪತ್ನಿ ಪಾರ್ವತಿ, ಮಕ್ಕಳು ಹಾಗೂ ಆತನ ಪೋಷಕರು ಮಾಂಗಲ್ಯ ಸರವನ್ನ ಗೃಹ ಸಚಿವರಿಗೆ ಕಳುಹಿಸಿದ್ದಾರೆ. ನ್ನ ಪತಿ ಸಾಲ ಮಾಡಿದ್ದಕ್ಕೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಅದರ ವಿರುದ್ಧ ಕ್ರಮವಾಗಬೇಕು ಅಂತ ಪೋಸ್ಟ್ ಮೂಲಕ ಗೃಸಚಿವರಿಗೆ ಮಾಂಗಲ್ಯ ಸರ ಕಳುಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.