ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲೆಗೈದು, ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ತಲೆಮರೆಸಿಕೊಂಡಿದ್ದ ಪತಿಯನ್ನು ಸರಗೂರು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಾಪುರ ನಿವಾಸಿ ಜಗದೀಶ್ (45) ಎಂದು ಬಂಧಿತ ಆರೋಪಿ. ಈತನ ಪತ್ನಿ ಶ್ರುತಿ (30) ಕೊಲೆಯಾದ ದುರ್ದೈವಿ.
ಜಗದೀಶ್ ಮತ್ತು ಶ್ರುತಿ ದಂಪತಿಗೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗುವಿದೆ. ದಂಪತಿಗಳು ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವೆ ಕ್ಷುಲ್ಲಕ ವಿಚಾರಗಳಿಗೂ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.
ಕಳೆದ ಗುರುವಾರ ಮಧ್ಯಾಹ್ನ ದಂಪತಿಗಳ ನಡುವೆ ಗಂಭೀರ ಜಗಳ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಜಗದೀಶ್ ಪತ್ನಿ ಶ್ರುತಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಶ್ರುತಿ ಸಾವನ್ನಪ್ಪಿದ್ದಾರೆ. ಪತ್ನಿ ಮೃತಪಡುತ್ತಿದ್ದಂತೆ ಗಾಬರಿಗೊಂಡ ಆರೋಪಿ, ಇದೊಂದು ಆತ್ಮಹತ್ಯೆ ಎಂದು ತೋರಿಸಲು ಶವಕ್ಕೆ ಸೀರೆಯಿಂದ ನೇಣು ಬಿಗಿದು ಅಲ್ಲಿಂದ ಪರಾರಿಯಾಗಿದ್ದ.
ಘಟನೆ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಹುಣಸೂರು ಡಿವೈಎಸ್ಪಿ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿ ಪತಿಯನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಜಗದೀಶ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬ್ರಿಟಿಷರ ಕಾಲದ ಪ್ರವಾಸಿ ಮಂದಿರ ಮುಂಭಾಗ ಒಂಟಿ ಸಲಗ



















