ನವದೆಹಲಿ: ನಟಿ ಶೆಫಾಲಿ ಜರಿವಾಲಾ ಅವರ ಅಕಾಲಿಕ ನಿಧನದ ನಂತರ ‘ಆ್ಯಂಟಿ-ಏಜಿಂಗ್'(ವೃದ್ಧಾಪ್ಯ ತಡೆಯುವ) ಔಷಧಿಗಳ ಸೇವನೆಯ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ, ಯೋಗ ಗುರು ಬಾಬಾ ರಾಮ್‌ದೇವ್ ಅವರು ಮಾನವರ ನೈಸರ್ಗಿಕ ಜೀವಿತಾವಧಿಯು ಕೇವಲ 100 ವರ್ಷಗಳಲ್ಲ, ಬದಲಿಗೆ 150 ರಿಂದ 200 ವರ್ಷಗಳು ಎಂದು ಪ್ರತಿಪಾದಿಸಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಕಳೆದ ಶುಕ್ರವಾರ ಹೃದಯಾಘಾತದಿಂದ ನಿಧನರಾದ 42 ವರ್ಷದ ಶೆಫಾಲಿ ಜರಿವಾಲಾ ಅವರು ನಿಯಮಿತವಾಗಿ ‘ಆ್ಯಂಟಿ-ಏಜಿಂಗ್’ ಔಷಧಿಗಳನ್ನು ಸೇವಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ರಾಮ್‌ದೇವ್ ಅವರ ಪ್ರಕಾರ, “ಮಾನವನ ನೈಸರ್ಗಿಕ ಜೀವಿತಾವಧಿ 100 ವರ್ಷಗಳಲ್ಲ. ಅದು ಕನಿಷ್ಠ 150-200 ವರ್ಷಗಳು. ಆದರೆ, ನಾವು ನಮ್ಮ ಮೆದುಳು, ಹೃದಯ, ಕಣ್ಣುಗಳು ಮತ್ತು ಯಕೃತ್ತಿನ ಮೇಲೆ ಅತಿಯಾದ ಹೊರೆಯನ್ನು ಹಾಕಿಕೊಂಡಿದ್ದೇವೆ. 100 ವರ್ಷಗಳಲ್ಲಿ ತಿನ್ನಬೇಕಾದ ಆಹಾರವನ್ನು ಕೇವಲ 25 ವರ್ಷಗಳಲ್ಲಿ ತಿನ್ನುತ್ತಿದ್ದೇವೆ” ಎಂದು ವ್ಯಾಖ್ಯಾನಿಸಿದ್ದಾರೆ.
“ನಿಮ್ಮನ್ನು ಸರಿಯಾಗಿ ನಿರ್ವಹಿಸಲು ನಿಮಗೆ ತಿಳಿದಿಲ್ಲ. ಉತ್ತಮ ಜೀವನಶೈಲಿ ರೂಢಿಸಿಕೊಂಡರೆ, 100 ವರ್ಷಗಳ ಕಾಲ ವಯಸ್ಸಾಗುವುದಿಲ್ಲ ಎಂಬುದು ಸತ್ಯ” ಎನ್ನುವ ಮೂಲಕ ಆಹಾರ ಶಿಸ್ತು ಮತ್ತು ಉತ್ತಮ ಜೀವನಶೈಲಿಯ ಪ್ರಾಮುಖ್ಯತೆಯನ್ನು ರಾಮ್‌ದೇವ್ ಒತ್ತಿ ಹೇಳಿದ್ದಾರೆ. “ನನಗೂ ಈಗ 60 ವರ್ಷ ದಾಟಿದೆ. ಆದರೆ ಯೋಗ, ಉತ್ತಮ ಆಹಾರ, ಸನ್ನಡತೆ ಮತ್ತು ಆರೋಗ್ಯಕರ ಜೀವನಶೈಲಿಯಿಂದಾಗಿ ನಾನು ಆರೋಗ್ಯವಾಗಿ, ಸದೃಢನಾಗಿ ಮತ್ತು ಶಕ್ತಿಯುತವಾಗಿದ್ದೇನೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಶೆಫಾಲಿ ಜರಿವಾಲಾ ಮತ್ತು 2021ರಲ್ಲಿ 40ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾದ ನಟ ಸಿದ್ಧಾರ್ಥ್ ಶುಕ್ಲಾ ಅವರ ಹಠಾತ್ ಸಾವುಗಳ ಕುರಿತು ಕೇಳಿದಾಗ, ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ರಾಮ್‌ದೇವ್, “ದೇಹದ ಹಾರ್ಡ್‌ವೇರ್ ಸರಿಯಾಗಿತ್ತು, ಸಾಫ್ಟ್‌ವೇರ್ ದೋಷಪೂರಿತವಾಗಿತ್ತು. ರೋಗಲಕ್ಷಣಗಳು ಸರಿಯಾಗಿದ್ದವು, ಆದರೆ ವ್ಯವಸ್ಥೆಯೇ ದೋಷಪೂರಿತವಾಗಿತ್ತು” ಎಂದು ಉತ್ತರಿಸಿದ್ದಾರೆ.
ಮಾನವ ದೇಹವು “ಒಳಗಿನಿಂದ ಬಲವಾಗಿರಬೇಕು” ಎಂದಿರುವ ಯೋಗ ಗುರು, ಬಾಹ್ಯ ಸೌಂದರ್ಯ ಮತ್ತು ಆಂತರಿಕ ಆರೋಗ್ಯದ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದರು. ಜೀವನದ ಚಕ್ರವನ್ನು ನಿಧಾನಗೊಳಿಸಲು ಸಾಧ್ಯವಿದೆ ಎಂದ ಅವರು, “ನಿಮ್ಮ ಆಹಾರ, ಪಥ್ಯ, ಆಲೋಚನೆಗಳು ಮತ್ತು ನಿಮ್ಮ ಭೌತಿಕ ದೇಹದ ರಚನೆ ಸರಿಯಾಗಿರಬೇಕು” ಎಂದು ಸಲಹೆ ನೀಡಿದರು. “ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ನೈಸರ್ಗಿಕ ಜೀವಿತಾವಧಿ ಇದೆ. ನೀವು ಅದಕ್ಕೆ ಅಡ್ಡಿಪಡಿಸಿದಾಗ, ಅದು ಆಂತರಿಕವಾಗಿ ವಿಪತ್ತುಗಳನ್ನು ಉಂಟುಮಾಡುತ್ತದೆ, ಹೃದಯಾಘಾತದಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ” ಎಂದು ಎಚ್ಚರಿಸಿದರು.
ಸ್ವಯಂ-ಔಷಧಿ ಸೇವನೆ?
‘ಕಾಂಟಾ ಲಗಾ’ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದ ಶೆಫಾಲಿ ಜರಿವಾಲಾ ಅವರ ಸಾವಿನ ತನಿಖೆ ವೇಳೆ ಪೊಲೀಸರಿಗೆ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಅವರ ಮುಂಬೈ ನಿವಾಸದಲ್ಲಿ ಎರಡು ಪೆಟ್ಟಿಗೆಗಳ ತುಂಬಾ ಔಷಧಿಗಳು ಪತ್ತೆಯಾಗಿದ್ದು, ಅವರು ಬಹುಶಃ ವೈದ್ಯರ ಸಲಹೆಯಿಲ್ಲದೇ ಸ್ವಯಂ-ಔಷಧಿಗಳನ್ನು ಸೇವಿಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಫೋರೆನ್ಸಿಕ್ ತಜ್ಞರು ಪರಿಶೀಲಿಸಿದಾಗ, ಗ್ಲುಟಾಥಿಯೋನ್ (ಸಾಮಾನ್ಯವಾಗಿ ಚರ್ಮದ ಕಾಂತಿ ಮತ್ತು ಡಿಟಾಕ್ಸಿಫಿಕೇಶನ್‌ಗಾಗಿ ಬಳಸುವ ಔಷಧಿ), ವಿಟಮಿನ್ ಸಿ ಇಂಜೆಕ್ಷನ್‌ಗಳು ಮತ್ತು ಆಸಿಡಿಟಿ ಮಾತ್ರೆಗಳು ಪತ್ತೆಯಾಗಿವೆ. ಇವುಗಳು ಶೆಫಾಲಿ ಅವರು ಕಳೆದ ಏಳರಿಂದ ಎಂಟು ವರ್ಷಗಳಿಂದ ‘ಆ್ಯಂಟಿ-ಏಜಿಂಗ್’ ಔಷಧಿಗಳನ್ನು ವೈದ್ಯರ ಮೇಲ್ವಿಚಾರಣೆಯಿಲ್ಲದೆ ಸೇವಿಸುತ್ತಿದ್ದರು ಎಂಬ ಮಾಹಿತಿಗೆ ಪೂರಕವಾಗಿವೆ. ಇದು ವೈದ್ಯಕೀಯ ತಜ್ಞರು ಮತ್ತು ಸಾರ್ವಜನಿಕರಲ್ಲಿ ಈ ಔಷಧಿಗಳ ಅಪಾಯಗಳ ಬಗ್ಗೆ ಗಂಭೀರ ಕಳವಳ ಮೂಡಿಸಿದೆ.



















