ಬೆಂಗಳೂರು : ಕರ್ನಾಟಕದಲ್ಲಿ ಆಯುಷ್ ಇಲಾಖೆ ಕಾರ್ಯನಿರ್ವಹಣೆಯಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ ಹಾಗೂ ಆಯುರ್ವೇದ ಆಸ್ಪತ್ರೆಗಳಲ್ಲಿ ಖಾಯಂ ತಜ್ಞ ವೈದ್ಯರ ಕೊರತೆ ಬಗ್ಗೆ ರಾಜ್ಯ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಘದ ಉಪಕಾರ್ಯದರ್ಶಿ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದ ಅನೇಕ ಆಯುರ್ವೇದ ಆಸ್ಪತ್ರೆಗಳಲ್ಲಿ ಪೈಲ್ಸ್, ಫಿಸ್ಟುಲಾ, ಫಿಸ್ಸರ್, ಸಂಧಿವಾತ ಹಾಗೂ ಚರ್ಮ ರೋಗಗಳಿಗೆ ಅಗತ್ಯವಾದ ತಜ್ಞ ವೈದ್ಯರೇ ಇಲ್ಲದಿರುವುದರಿಂದ ಸಾರ್ವಜನಿಕರು ಸಮರ್ಪಕ ಚಿಕಿತ್ಸೆ ಪಡೆಯಲು ವಿಫಲರಾಗುತ್ತಿದ್ದಾರೆ ಎಂದು ದೂರಲಾಗಿದೆ. ಸರ್ಕಾರದ ಅನುದಾನದಲ್ಲಿ “ಅಪ್‌ಗ್ರೇಡ್” ಮಾಡಲಾಗಿದೆ ಎಂದು ಹೇಳಲಾಗುವ ಹಲವಾರು ಆಸ್ಪತ್ರೆಗಳು ವಾಸ್ತವದಲ್ಲಿ ತಜ್ಞ ವೈದ್ಯರಿಲ್ಲದೆ, ಮೂಲಸೌಕರ್ಯ ಕೊರತೆಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಔಷಧ ಮತ್ತು ಅಗತ್ಯ ಸಾಧನಗಳ ಅಭಾವವೂ ಕಂಡುಬರುತ್ತಿದೆ ಎಂದಿದ್ದಾರೆ.
ಈ ಹಿನ್ನೆಲೆ ಗ್ರಾಮೀಣ ಹಾಗೂ ಬಡ ವರ್ಗದ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾಗಿದ್ದು, ಸಾಲ ಬಾಧೆಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ, ಹಲವು ವರ್ಷಗಳಿಂದ ತಾತ್ಕಾಲಿಕ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಕಡಿಮೆ ವೇತನ ನೀಡಲಾಗುತ್ತಿದ್ದು, ಖಾಯಂ ಹುದ್ದೆಗಳ ಭದ್ರತೆ ಇಲ್ಲದಿರುವುದು ಆರೋಗ್ಯ ಸೇವೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮಾಹಿತಿ ಹಕ್ಕು ಅಧಿನಿಯಮ ಅಡಿಯಲ್ಲಿ ಕೇಳಿದ ಮಾಹಿತಿಗೂ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯದ ಎಲ್ಲಾ ಆಯುರ್ವೇದ ಆಸ್ಪತ್ರೆಗಳಲ್ಲಿ ಖಾಯಂ ತಜ್ಞ ವೈದ್ಯರ ನೇಮಕ, “ಅಪ್‌ಗ್ರೇಡ್” ಆಸ್ಪತ್ರೆಗಳ ಪರಿಶೀಲನೆ ಹಾಗೂ ಭ್ರಷ್ಟಾಚಾರ ವಿರುದ್ಧ ತನಿಖೆ ನಡೆಸುವಂತೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಉಪಚುನಾವಣೆಯ ರಣರಂಗ : ಇಂದು ದಾವಣಗೆರೆ –ಬಾಗಲಕೋಟೆಯಲ್ಲಿ ಮತದಾನ, ಯಾರಿಗೆ ವಿಜಯಲಕ್ಷ್ಮಿ?


















