ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh 2025) ಭಾರಿ ದುರಂತವೊಂದು ತಪ್ಪಿದೆ. ಗಂಗಾ ನದಿಯಲ್ಲಿ ಮುಳುಗುತ್ತಿದ್ದ ದೋಣಿಯಿಂದ ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ಸಿಬ್ಬಂದಿಯು 17 ಭಕ್ತರನ್ನು ರಕ್ಷಿಸುವ ಮೂಲಕ ದುರಂತ ತಪ್ಪಿಸಿದ್ದಾರೆ.
ಗಂಗಾ ನದಿಯಲ್ಲಿ ಭಕ್ತರು ದೋಣಿಯಲ್ಲಿ ಸಂಚರಿಸುತ್ತಿದ್ದರು. ಇದೇ ವೇಳೆ ದೋಣಿಯು ನಿಯಂತ್ರಣ ತಪ್ಪಿದೆ. ಅಲ್ಲದೆ ದೋಣಿ ಮುಳುಗಲು ಆರಂಭಿಸಿದೆ. ಆಗ ದೋಣಿಯಲ್ಲಿದ್ದ ಜನರು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆಗ ಗಸ್ತು ತಿರುಗುತ್ತಿದ್ದ ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ಸಿಬ್ಬಂದಿಯು ಕೂಡಲೇ ದೋಣಿಯಿಂದ 17 ಜನರನ್ನು ರಕ್ಷಣೆ ಮಾಡಿದ್ದಾರೆ.
ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ಸಿಬ್ಬಂದಿಯ ಶೌರ್ಯದಿಂದ 17 ಜನರ ಪ್ರಾಣ ಉಳಿದಂತಾಗಿದೆ. ಎನ್ ಡಿಆರ್ ಎಫ್ ಸಿಬಂದಿಯು 9 ಜನರನ್ನು ರಕ್ಷಿಸಿದರೆ, ಎಸ್ ಡಿಆರ್ ಎಫ್ ಸಿಬ್ಬಂದಿಯು 8 ಜನರನ್ನು ರಕ್ಷಿಸಿದ್ದಾರೆ. ಸಿಬ್ಬಂದಿಯ ಶೌರ್ಯಕ್ಕೆ ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 12ರಂದು ಲಕ್ಷಾಂತರ ಜನ ಸ್ನಾನ ಮಾಡುವಾಗ ಕಾಲ್ತುಳಿತ ಸಂಭವಿಸಿ 30 ಭಕ್ತರು ಮೃತಪಟ್ಟಿದ್ದರು. ಇದಾದ ಬಳಿಕ ಉತ್ತರ ಪ್ರದೇಶ ಸರ್ಕಾರವು ಸುರಕ್ಷತೆಗೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ. ಇದುವರೆಗೆ ತ್ರಿವೇಣಿ ಸಂಗಮದಲ್ಲಿ 62 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಫೆಬ್ರವರಿ 26ರ ಮಹಾ ಶಿವರಾತ್ರಿಯಂದು ಮಹಾ ಕುಂಭ ಮೇಳವು ಸಂಪನ್ನವಾಗಲಿದೆ.