ಬೆಂಗಳೂರು: ಪ್ರಸಕ್ತ 2024-25ನೇ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಹಂತಕ್ಕೆ ಬಂದು ನಿಂತಿದೆ. 11 ತಿಂಗಳಲ್ಲಿ ಬಜೆಟ್ ವೆಚ್ಚ ಶೇ. 68ರಷ್ಟು ದಾಟಿಲ್ಲ. ಹೀಗಾಗಿ 2024ರ ಮಾರ್ಚ್ 31ರೊಳಗೆ ಬಾಕಿ ಶೇ. 32ರಷ್ಟು ಅಂದರೆ 1.02 ಲಕ್ಷ ಕೋಟಿ ರೂ. ವೆಚ್ಚ ಮಾಡಬೇಕಿದೆ. ಆದರೆ, ಶೇ. 100ರ ಗುರಿ ತಲುಪುವುದು ಸದ್ಯದ ಸ್ಥಿತಿಯಲ್ಲಿ ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗುವಂತಾಗುತ್ತಿದೆ.
ವಾಸೋದ್ಯಮ ಹಾಗೂ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗ ಮಾತ್ರ ಶೇ.100ರಷ್ಟು ಅನುದಾನ ಬಳಸಿ ಗುರಿ ಸಾಧಿಸಿವೆ. ಆದರೆ, ಬಹುತೇಕ ಇಲಾಖೆಗಳು ಸರಾಸರಿ ವೆಚ್ಚವಾದ ಶೇ.68ಕ್ಕಿಂತಲೂ ಕಡಿಮೆಯಿರುವುದು ಕಂಡು ಬಂದಿದೆ.
2024-25ನೇ ಸಾಲಿನ ಬಜೆಟ್‌ನಲ್ಲಿ ಇಲಾಖೆಗಳಿಗೆ ಒಟ್ಟು 3.79 ಲಕ್ಷ ಕೋಟಿ ರೂ. ಹಂಚಿಕೆಯಾಗಿತ್ತು. ಆರಂಭಿಕ ಶಿಲ್ಕು ರೂಪದಲ್ಲಿ14,142 ಕೋಟಿ ರೂ. ಸೇರಿದಂತೆ ಒಟ್ಟು 3.22 ಲಕ್ಷ ಕೋಟಿ ರೂ.ಗಳನ್ನು ಇಲಾಖೆಗಳ ಮೂಲಕ ವೆಚ್ಚ ಮಾಡುವ ಗುರಿಯಿತ್ತು.
ಪ್ರವಾಸೋದ್ಯಮ ಇಲಾಖೆಗೆ 240 ಕೋಟಿ ರೂ. ಹಂಚಿಕೆಯಾಗಿದ್ದು, ಇತರೆ ಅನುದಾನಗಳು ಸೇರಿದಂತೆ 356.91 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ 337 ಕೋಟಿ ರೂ. ವೆಚ್ಚ ಮಾಡುವ ಮೂಲಕ ವಾರ್ಷಿಕ ಗುರಿ ಮೀರಿ ಸಾಧನೆ ತೋರಿಸಿದೆ.
ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗಕ್ಕೆ 11,595 ಕೋಟಿ ರೂ. ಹಂಚಿಕೆಯಾಗಿದ್ದು, ಕೇಂದ್ರ ಸರ್ಕಾರದ ನೆರವು, ಪರಿಹಾರ ಸೇರಿದಂತೆ ಬಿಡುಗಡೆಯಾದ ಮೊತ್ತ 14,005 ಕೋಟಿ ರೂ. ಆಗಿದೆ. ಆ ಪೈಕಿ 13,107 ಕೋಟಿ ರೂ. ಬಳಕೆಯಾಗಿದ್ದು, ಗುರಿ ಮೀರಿ ಸಾಧನೆಯಾಗಿದೆ ಎನ್ನಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಜಲ ಸಂಪನ್ಮೂಲ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳ ಅನುದಾನ ಬಳಕೆ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ ಇದೆ.
ಇಲಾಖೆವಾರು ಅಂಕಿ- ಅಂಶ ಗಮನಿಸುವುದಾದರೆ..
ಆಹಾರ ಮತ್ತು ನಾಗರಿಕ ಸರಬರಾಜು- ಶೇ.55.64 (ಹಂಚಿಕೆ: 9978 ಕೋಟಿ ರೂ.)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ- ಶೇ.63 (ಹಂಚಿಕೆ: 11,261 ಕೋಟಿ ರೂ.)
ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ- ಶೇ.67.24 (ಹಂಚಿಕೆ: 38651 ಕೋಟಿ ರೂ.)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್- ಶೇ.48.31 (ಹಂಚಿಕೆ: 25,084 ಕೋಟಿ ರೂ.)
ಜಲ ಸಂಪನ್ಮೂಲ- ಶೇ.49.16 (ಹಂಚಿಕೆ: 16,832 ಕೋಟಿ ರೂ.)
ಲೋಕೋಪಯೋಗಿ- ಶೇ.69.14 (ಹಂಚಿಕೆ: 9926 ಕೋಟಿ ರೂ.)
ಸಣ್ಣ ನೀರಾವರಿ- ಶೇ.75.14 (ಹಂಚಿಕೆ: 2388 ಕೋಟಿ ರೂ.) ಸರ್ಕಾರದ ಸಾಧನೆಗೆ ಜನ ಮಾತ್ರ ಬೇಸರಿಸಿಕೊಳ್ಳುತ್ತಿದ್ದಾರೆ.