ಬೆಂಗಳೂರು: ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿ, ಕೇರಳ ಮೂಲದ 7 ಡ್ರಗ್ ಪೆಡ್ಲರ್ಸ್ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಡ್ರಗ್ ಪೆಡ್ಲರ್ಗಳ ಪೈಕಿ ಇಬ್ಬರು ಕರ್ನಾಟಕ, ಮತ್ತೋರ್ವ ಆಂಧ್ರ ಮೂಲದವರಾಗಿದ್ದು, ಉಳಿದ ಎಳು ಜನರು ಕೇರಳದವರಾಗಿದ್ದಾರೆ ಎಂದು ತಿಳಿದು ಬಂದಿದೆ.. ಆರೋಪಿಗಳು ಥೈಲ್ಯಾಂಡ್‌ನಿಂದ ಡ್ರಗ್ಸ್ ತರಿಸಿಕೊಂಡು ಡಾರ್ಕ್‌ವೆಬ್‌ನಲ್ಲಿ ‘ಟೀಂ ಕಲ್ಕಿ’ ಎಂಬ ವೆಬ್‌ಸೈಟ್ ಮೂಲಕ ಡ್ರಗ್ಸ್‌ಗಾಗಿ ಆರ್ಡರ್ ಮಾಡುತ್ತಿದ್ದರು. ಥೈಲ್ಯಾಂಡ್‌ನಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬ ವಿಮಾನದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಕಳುಹಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿಗೆ ತಲುಪಿದ ನಂತರ, ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಮತ್ತು ಪಾರ್ಟಿಗಳಿಗೆ ಬರುವವರನ್ನೇ ಪ್ರಮುಖ ಗುರಿಯಾಗಿಸಿಕೊಂಡು ನಗರದಾದ್ಯಂತ ಡ್ರಗ್ಸ್ ವಿತರಿಸುತ್ತಿದ್ದರು.
ಸದ್ಯ ಬಂಧಿತರಿಂದ 3 ಕೆಜಿ ಹೈಡ್ರೋ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, 10 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಅಮೃತಹಳ್ಳಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದ ಇಸ್ಕಾನ್ ದೇವಾಲಯದಲ್ಲಿ ಕಳ್ಳತನ | 14 ವಿಗ್ರಹಗಳ ಲೂಟಿ



















