ರಾಯಚೂರು: ಕಲ್ಲೂರು ಮಹಾಲಕ್ಷ್ಮಿ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆಯೊಂದು ನಡೆದಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪ್ರಸಿದ್ದ ದೇವಾಲಯಕ್ಕೆ ಖದೀಮರು ಕನ್ನ ಹಾಕಿದ್ದಾರೆ. ದೇವಸ್ಥಾನದೊಳಗೆ ನುಗ್ಗಿದ್ದ ಖದೀಮರು, ದೇವರ ಮೈಮೇಲಿದ್ದ ಸುಮಾರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ 290 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ. 80 ಗ್ರಾಂ ತೂಕದ ವೆಂಕಟೇಶ್ವರ ಸ್ವಾಮಿ ಕಿರೀಟ, 30 ಗ್ರಾಂ ತೂಕದ ಲಕ್ಷ್ಮೀ ಕಿರೀಟ, 140 ಗ್ರಾಂ ಪಾದಗಳು, 40 ಗ್ರಾಂ ಪದಕ ಸೇರಿ 290 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ..
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದರೂ ದೇವಾಲಯದ ಆಡಳಿತ ಮಂಡಳಿ ಸಿಸಿ ಕ್ಯಾಮೆರಾ ಅಳವಡಿಸಿರಲಿಲ್ಲ. ಇದನ್ನೇ ಗಮನಿಸಿದ ಖದೀಮರು ದೋಚಿ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.