ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೆ ಕಮಲ ಅರಳಿದೆ. ಅವಳಿ ನಗರದ ಪಾಲಿಕೆ ಮತ್ತೊಮ್ಮೆ ಕಮಲದ ತೆಕ್ಕೆಗೆ ಬಿದ್ದಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ಜ್ಯೋತಿ ಪಾಟೀಲ ಹಾಗೂ ಉಪ ಮೇಯರ್ ಆಗಿ ಸಂತೋಷ್ ಚವ್ಹಾಣ ಆಯ್ಕೆಯಾಗಿದ್ದಾರೆ. ಮೇಯರ್ ಹಾಗೂ ಉಪಮೇಯರ್ ಆಯ್ಕೆಯ ಹಿನ್ನೆಲೆಯಲ್ಲಿ ಇಂದು ಪಾಲಿಕೆಯಲ್ಲಿ ಚುನಾವಣೆ ನಡೆದಿತ್ತು. ಕಾಂಗ್ರೆಸ್ ನ ಸುವರ್ಣ ಕಲಕುಂಟ್ಲ ವಿರುದ್ಧ ಜ್ಯೋತಿ ಪಾಟೀಲ ಗೆಲುವು ಸಾಧಿಸಿದ್ದಾರೆ. ಶಂಭುಲಿಂಗ ಸಾಲಮನಿ ವಿರುದ್ಧ ಸಂತೋಷ್ ಚವ್ಹಾಣ ಗೆಲುವು ಸಾಧಿಸಿದ್ದಾರೆ.
ಮೇಯರ್ ಸ್ಥಾನಕ್ಕೆ ಮೂವರು, ಉಪ ಮೇಯರ್ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಸಂಸದ, ಶಾಸಕ, ಪಾಲಿಕೆ ಸದಸ್ಯರು ಸೇರಿದಂತೆ ಒಟ್ಟು 90 ಸದಸ್ಯರ ಬಲವನ್ನು ಪಾಲಿಕೆ ಹೊಂದಿದೆ. 87 ಸದಸ್ಯರು ಸಭೆಗೆ ಹಾಜರಾಗಿದ್ದಾರೆ. ಈ ಪೈಕಿ ತಲಾ 47 ಮತ ಪಡೆದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರಲು ಬಿಜೆಪಿ ಯಶಸ್ಸು ಕಂಡಿದೆ. ನೂತನ ಮೇಯರ್ ಮತ್ತು ಉಪ ಮೇಯರ್ ಗೆ ಚುನಾವಣಾಧಿಕಾರಿ ಸಂಜಯ್ ಶೆಟ್ಟಣ್ಣವರ ಅಭಿನಂದನೆ ಸಲ್ಲಿಸಿದ್ದಾರೆ.



















