ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿದ್ದವು. ಜನರು ಬೀದಿಗಳಿದು ರೊಚ್ಚಿಗೆದ್ದಿದ್ದರು. ಪೊಲೀಸರ ಗುಂಡಿಗೆ ಆರೋಪಿ ಬಲಿಯಾಗಿದ್ದು, ಈಗ ಸರ್ಕಾರ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ.
ಪರಿಹಾರ ನೀಡುವುದಾಗಿ ವಿಪ ಸದಸ್ಯ ಸಲೀಮ್ ಅಹ್ಮದ್ ಹೇಳಿದ್ದಾರೆ. ಬಿಹಾರದ ಮೂಲದ ಸೈಕೋಪಾತ್ 5 ವರ್ಷದ ಬಾಲಕಿಗೆ ಚಾಕೋಲೇಟ್ ಆಸರೆ ತೋರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಎನ್ನಲಾಗಿದೆ. ಪೊಲೀಸರ ಎನ್ ಕೌಂಟರ್ ನಲ್ಲಿ ಆರೋಪಿ ಬಲಿಯಾಗಿದ್ದಾನೆ. ಬಿಹಾರ ಮೂಲದ ಆರೋಪಿ ರಿತೇಶ್ ಕುಮಾರ್ ಪೊಲೀಸರ ಗುಂಡೇಟಿಗೆ ಬಲಿಯಾದ ಆರೋಪಿಯಾಗಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಕಲ್ಲು ತೂರಿ, ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಹುಬ್ಬಳ್ಳಿ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಅನ್ನಪೂರ್ಣ ಹಾರಿಸಿದ ಗುಂಡು ಎದೆಗೆ ತಾಗಿ ಗಾಯಗೊಂಡಿದ್ದ ಆರೋಪಿಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆರೋಪಿ ಎನ್ ಕೌಂಟರ್ ಗೆ ಬಲಿಯಾಗಿದ್ದಕ್ಕೆ ಜನರು ಹರ್ಷ ವ್ಯಕ್ತಪಡಿಸಿದ್ದು, ಹುಬ್ಬಳ್ಳಿ- ಧಾರವಾಡ ಕಮಿಷನರ್ ಶಶಿಕುಮಾರ್ ಗೆ ಜೈಕಾರ ಹಾಕಿದ್ದರು.