ಬೆಂಗಳೂರು: ಇಲ್ಲಿಯ ಅರಮನೆ ಮೈದಾನದಲ್ಲಿ ‘ಇನ್ವೆಸ್ಟ್ ಕರ್ನಾಟಕ-2025’ (Invest Karnataka 2025) ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ ಸಿಕ್ಕಿದೆ. ಈ ಸಮಾವೇಶಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ವ್ಹೀಲ್ ಚೇರ್‌ನಲ್ಲಿ ಆಗಮಿಸಿರುವುದು ಆತಂಕ ಹಾಗೂ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ, ಉದ್ಘಾಟನೆ ವೇಳೆ ಕೂಡ ಸಿಎಂ ಪಕ್ಕದಲ್ಲಿದ್ದವರ ಸಹಾಯ ಪಡು ಎದ್ದು ನಿಂತರು. ಹೀಗಾಗಿ ಕಾರ್ಯಕರ್ತರು ಇದನ್ನು ಕಂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಎಡಗಾಲಿನ ಮಂಡಿ ನೋವಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಡಾ. ಸತ್ಯನಾರಾಯಣ ಚಿಕಿತ್ಸೆ ನೀಡಿ, ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಅವರ ಮಂಡೆನೋವು ಇನ್ನೂ ಹಾಗೆ ಇದೆ. ಹೀಗಾಗಿಯೇ ಅವರು ವ್ಹೀಲ್ ಚೇರ್ ನಲ್ಲೇ ಬಂದಿದ್ದಾರೆ ಎನ್ನಲಾಗುತ್ತಿದೆ.
ಫೆ. 14ರವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಹೊಸ ಅವಕಾಶಗಳು ಮತ್ತು ಜಾಗತಿಕ ಪಾಲುದಾರಿಕೆ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕದ ಪರಿವರ್ತನಾತ್ಮಕ ಪ್ರಗತಿಯಲ್ಲಿ ಭಾಗಿಯಾಗಲು ಹೂಡಿಕೆದಾರರಿಗೆ ರಾಜ್ಯ ಸರ್ಕಾರ ಕರೆ ಕೊಟ್ಟಿದೆ.
‘ಪ್ರಗತಿಯ ಮರು ಕಲ್ಪನೆ’ ಥೀಮ್ ನೊಂದಿಗೆ ಫೆಬ್ರವರಿ 12 ರಿಂದ 14ರವರೆಗೂ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ʼಇನ್ವೆಸ್ಟ್ ಕರ್ನಾಟಕ 2025ʼ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಡಿಸಿಎಂ ಡಿ.ಕೆ. ಶಿವಕುಮಾರ್, ಉದ್ಯಮಿ ಕಿರಣ್ ಮಜುಂದಾರ್ ಸೇರಿ ಹಲವರು ಭಾಗಿಯಾಗಿದ್ದರು. ಅಲ್ಲದೇ 19 ದೇಶಗಳ 2,000ಕ್ಕೂ ಹೆಚ್ಚು ಹೂಡಿಕೆದಾರರು, ಉದ್ಯಮಿಗಳು, ರಾಜ್ಯ ಸರ್ಕಾರದ ಸಚಿವರುಗಳು, ಶಾಸಕರು ಸೇರಿದಂತೆ ಹಲವರು ಇದ್ದರು.