ಟಿ.ನರಸೀಪುರ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಅದ್ಭುತ ಸ್ಪಂದನೆ ದೊರೆಯುತ್ತಿದ್ದು, ಕೋಟ್ಯಂತರ ಜನ ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ಇದರ ಮಧ್ಯೆಯೇ, ಟಿ.ನರಸೀಪುರದಲ್ಲಿ ಸೋಮವಾರದಿಂದ ಆರಂಭವಾಗಿರುವ ದಕ್ಷಿಣ ಭಾರತದ ಕುಂಭಮೇಳದಲ್ಲಿ ಮೊದಲ ದಿನವೇ 50 ಸಾವಿರಕ್ಕೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿದ್ದಾರೆ.
ತಿರುಮಕೂಡಲಿನ ಕಾವೇರಿ, ಕಪಿಲಾ, ಗುಪ್ತಗಾಮಿನಿ ಸ್ಫಟಿಕ ಸರೋವರದ ತ್ರಿವೇಣಿ ಸಂಗಮದಲ್ಲಿ ಆರಂಭವಾದ 13ನೇ ಕುಂಭಮೇಳಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಟಿ.ನರಸೀಪುರದಲ್ಲಿ 6 ವರ್ಷಗಳ ಬಳಿಕ ಕುಂಭಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ಗುಂಪು ಗುಂಪಾಗಿ ಸ್ನಾನಘಟ್ಟಗಳಿಗೆ ತೆರಳಿ ಪುಣ್ಯ ಸ್ನಾನ ಮಾಡಿದರು.
ಸಂಜೆಯಾದರೂ ಭಕ್ತರ ಸಂಖ್ಯೆ ಕಡಿಮೆಯಾಗಲಿಲ್ಲ. ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೇರಿ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರು ಬಂದು ಸ್ನಾನ ಮಾಡಿದರು.
ಮೂರು ವೇದಿಕೆಗಳಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಮೂರು ಕಡೆ ಸ್ಥಳ ನಿಯೋಜನೆ ಮಾಡಲಾಗಿದೆ. ಅಗಸ್ತೇಶ್ವರ ದೇವಾಲಯ, ಗುಂಜಾನರಸಿಂಹಸ್ವಾಮಿ ದೇವಾಲಯ, ಭಿಕ್ಷೇಶ್ವರ ದೇವಸ್ಥಾನದ ಬಳಿ ಪುಣ್ಯಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೂರು ದಿನವೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.