ನವದೆಹಲಿ: 2025 ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ವೇಗಿ ಬುಮ್ರಾ ಸೇರಿಕೊಳ್ಳುವರೇ (Jasprit Bumrah) ಎಂಬ ಕುತೂಹಲ ಇನ್ನೂ ಉಳಿದಿದೆ. ಆಸ್ಟ್ರೇಲಿಯಾ ಪ್ರವಾಸದ 5ನೇ ಟೆಸ್ಟ್ನಲ್ಲಿ ಗಾಯಗೊಂಡಿದ್ದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ಚೇತರಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದ್ದು ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರವಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬುಮ್ರಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ವೇತನ ಶುರುಮಾಡಿಕೊಂಡಿದ್ದಾರೆ. ಬುಮ್ರಾ ಸ್ಕ್ಯಾನ್‌ಗೆ ಒಳಗಾಗಿದ್ದು, ಮುಂದಿನ 24 ಅಥವಾ 48 ಗಂಟೆಗಳಲ್ಲಿ ಬೌಲಿಂಗ್ ಸೇರಿದಂತೆ ದೈಹಿಕ ಚಟುವಟಿಕೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ.
Enjoy Jasprit Bumrah Greatness. pic.twitter.com/Lp9dfbMNTS
— Vikas Yadav (@VikasYadav66200) February 7, 2025
ಕೊನೆ ಕ್ಷಣದವರೆಗೂ ಕಾಯಲಿದೆ ಬಿಸಿಸಿಐ
ಚಾಂಪಿಯನ್ಸ್ ಟ್ರೋಫಿಗೆ ಪ್ರಕಟವಾದ ತಂಡಗಳಲ್ಲಿ ಫೆಬ್ರವರಿ 11ರ ತನಕ ಬದಲಾವಣೆ ಮಾಡಲು ಅವಕಾಶ ಇದೆ. ಹೀಗಾಗಿ ಬುಮ್ರಾಗೆ ಬಿಸಿಸಿಐ ಕಾಯಲು ಸಿದ್ಧವಾಗಿದೆ.
2023ರ ಏಕದಿನ ವಿಶ್ವಕಪ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರೊಂದಿಗೂ ಬಿಸಿಸಿಐ ಅದೇ ರೀತಿ ಮಾಡಿತ್ತು. ವಿಶ್ವಕಪ್ನಲ್ಲಿ ಹಾರ್ದಿಕ್ ಗಾಯಗೊಂಡ ನಂತರ ಪ್ರಸಿದ್ಧ್ ಕೃಷ್ಣ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಳ್ಳುವ ಮೊದಲು ಸುಮಾರು 2 ವಾರಗಳ ಕಾಲ ಹಾರ್ದಿಕ್ಗಾಗಿ ಬಿಸಿಸಿಐ ಕಾದಿತ್ತು.
ಬುಮ್ರಾ ಫಿಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿದ್ದರೂ ಚಾಂಪಿಯನ್ಸ್ ಟ್ರೋಫಿಗೆ ಮರಳುವುದರ ಕುರಿತು ಯಾವುದೇ ಸ್ಪಷ್ಟೀಕರಣ ಸಿಕ್ಕಿಲ್ಲ. ಕೆಲವೊಂದು ಬೆಳವಣಿಗೆಗಳು ಅವರು ಮಹತ್ವದ ಟೂರ್ನಿ ಆಡುವುದು ಬಹುತೇಕ ಖಚಿತ ಎಂದು ಹೇಳುತ್ತಿವೆ.
ದೊಡ್ಡ ಪಂದ್ಯಗಳಿಗೆ ಬುಮ್ರಾ ಲಭ್ಯರು ಎಂದ ಬಿಸಿಸಿಐ ಅಧಿಕಾರಿ
ಬುಮ್ರಾ ಅವರಂತಹ ಚಾಂಪಿಯನ್ ಬೌಲರ್ ಅನ್ನು ನೀವು ಅತಿಯಾಗಿ ಬಳಸಲು ಸಾಧ್ಯವಿಲ್ಲ. ಅವರು ದೊಡ್ಡ ಟೂರ್ನಿಗಳಿಗೆ ಲಭ್ಯವಿರುತ್ತಾರೆ. ಹೆಚ್ಚು ಚಿಂತಿಸುವ ಅಗತ್ಯವೂ ಇಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ಅವಧಿಯಲ್ಲಿ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಜಸ್ಪ್ರೀತ್ ಬುಮ್ರಾ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಹೇಳಿದ್ದರು.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0ರಲ್ಲಿ ಸರಣಿ ಗೆದ್ದಿದೆ. ಹೀಗಾಗಿ ಬುಮ್ರಾ ಅವರನ್ನು ತಂಡಕ್ಕೆ ಸೇರಿಸಿ ಒತ್ತಡ ನೀಡಲು ಬಿಸಿಸಿಐ ಸಜ್ಜಾಗಿಲ್ಲ.