ಬೆಂಗಳೂರು: ಉದಯಗಿರಿ ಘಟನೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷ ನಾಯಕ ಆರ್. ಅಶೋಕ್ ಸದ್ಯ ಘಟನೆಗೆ ಸಂಬಂಧಿಸಿದಂತೆ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಓಲೈಕೆ ರಾಜಕಾರಣದಿಂದಾಗಿಯೇ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ (Siddaramaiah) ಮುಸ್ಲಿಂ ಮತಾಂಧರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದರಿಂದ ಪೊಲೀಸರ ಮೇಲೂ ಹಲ್ಲೆ ಮಾಡುವಷ್ಟು ಧೈರ್ಯ ಮತಾಂಧರಿಗೆ ಬಂದಿದೆ ಎಂದು ಗುಡುಗಿದ್ದಾರೆ.
ಭಂಡ ಕಾಂಗ್ರೆಸ್ (Congress) ಸರ್ಕಾರದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಹುಬ್ಬಳ್ಳಿಯಲ್ಲಿ ಆದಂತೆಯೇ ಮೈಸೂರಿನಲ್ಲಿ (Mysuru) ಪೊಲೀಸರ ಮೇಲೆ ಹಲ್ಲೆ ನಡೆದಿದೆ. ರಾಹುಲ್ ಗಾಂಧಿ, ಕೇಜ್ರಿವಾಲ್ ಕುರಿತು ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ಮತಾಂಧ ಮುಸ್ಲಿಂರು ಫೆ.10ರ ಸಂಜೆ 6 ರಿಂದ 7 ಗಂಟೆ ಸಮಯದಲ್ಲಿ ಚೀಲಗಳಲ್ಲಿ ಕಲ್ಲು ತುಂಬಿಕೊಂಡು ಬಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಹಿಂದೂ ಸಮುದಾಯದ ಜನರಿಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಇಡೀ ಮೈಸೂರಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅವರ ಕೇಸ್ ಗಳನ್ನು ಈ ಸರ್ಕಾರ ಹಿಂಪಡೆದಿದ್ದಕ್ಕೆ ಅವರಿಗೆ ಧೈರ್ಯ ಬಂದಿದೆ.
ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಇದು ಮುಸ್ಲಿಮರ ಸರ್ಕಾರ ಎಂದು ಹೇಳಿರುವುದರಿಂದ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಬಹುದು ಎಂಬ ವಿಶ್ವಾಸ ಅವರಿಗೆ ಬಂದಿದೆ. ಒಂದೆಡೆ ಆರ್ಥಿಕ ದುಸ್ಥಿತಿ ಇದ್ದರೆ, ಮತ್ತೊಂದೆಡೆ ಕಾನೂನು ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.