ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಸಹೋದರಿ ಎಂದು ಹೇಳಿಕೊಂಡು ಹಲವರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಐಶ್ವರ್ಯಾ ಗೌಡ ಈಗ ತನಿಖಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ತನಿಖಾಧಿಕಾರಿಯಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಮುಟ್ಟಿನ ದಿನಗಳು ನಡೆಯುತ್ತಿದ್ದು, ಕಾಲುಗಳು ಊದಿಕೊಂಡಿವೆ. ಹೆಜ್ಜೆ ಎತ್ತಿಡಲೂ ಆಗುತ್ತಿಲ್ಲ. ಆದರೂ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲಿನ ಸ್ಥಿರಾಸ್ತಿಯ ಮಹಜರು ಪ್ರಕ್ರಿಯೆಗೆ ನಂತರ ಹಾಜರಾಗುತ್ತೇನೆ ಎಂದರೂ ಕೇಳಲಿಲ್ಲ. ಬಾರದಿದ್ದರೆ ಆಂಬುಲೆನ್ಸ್ ತಂದು ಎತ್ತಿಹಾಕಿಕೊಂಡು ಹೋಗುತ್ತೇನೆ ಎಂದು ತನಿಖಾಧಿಕಾರಿ ಎಸಿಪಿ ಭರತ್ ಎಸ್.ರೆಡ್ಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಕೋರಿ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಕೆ.ಎನ್. ಹರೀಶ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಮಾಣ ಪತ್ರಕ್ಕೆ ಪ್ರತಿ ಉತ್ತರ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿರುವ ಪೀಠವು ವಿಚಾರಣೆಯನ್ನು ಮುಂದೂಡಿದೆ. ಐಶ್ವರ್ಯಾ ಗೌಡ ಆರೋಪಿಯಾಗಿರುವ ಪ್ರಕರಣಗಳ ತನಿಖಾಧಿಕಾರಿಯಾದ (ಐಒ) ಬ್ಯಾಟರಾಯನಪುರದ ಎಸಿಪಿ ಭರತ್ ಎಸ್.ರೆಡ್ಡಿ ತನಿಖೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯ ಪರ ವಕೀಲ ಎಸ್. ಸುನಿಲ್ ಕುಮಾರ್ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ.
ಭರತ್ ರೆಡ್ಡಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕೆಟ್ಟ ಭಾಷೆ ಬಳಕೆ ಮಾಡಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಅವರು ಕಾನೂನಿಗೆ ವಿರುದ್ಧವಾಗಿ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲಿ ಅವಮಾನ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ನಮ್ಮ ಹೇಳಿಕೆ ದಾಖಲಿಸಿಕೊಳ್ಳದೆ ಅವರು ಬರೆದುಕೊಂಡು ಬಂದಿದ್ದ ಹೇಳಿಕೆಗಳಿಗೆ ನಮ್ಮ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ವಂಚಿಸಿರುವ ಹಣದಲ್ಲಿ ಕಿರುಗಾವಲಿನಲ್ಲಿ ನಾಲ್ಕು ಗುಂಟೆ ಜಮೀನು ಖರಿದೀಸಿದ್ದೀರಿ. ಅದನ್ನು ಮಹಜರು ಮಾಡಬೇಕು ಬನ್ನಿ ಎಂದು ಸತತವಾಗಿ ಕಿರುಕುಳ ನೀಡಿದ್ದಾರೆ. ನಾನು ಮುಟ್ಟಿನ ಸಮಯದಲ್ಲಿದ್ದೇನೆ. ಐದು ದಿನಬಿಟ್ಟು ತನಿಖೆಗೆ ಹಾಜರಾಗುತ್ತೇನೆ ಎಂದರೂ ಕೇಳಲಿಲ್ಲ ಎಂದು ಆರೋಪಿಸಿದ್ದಾರೆ.
ಎಸಿಪಿ ಭರತ್ ರೆಡ್ಡಿ ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿದ್ದರು. ಸಾಕಷ್ಟು ಪ್ರಕರಣಗಳನ್ನು ಭೇದಿಸುವಲ್ಲಿ ಭರತ್ ರೆಡ್ಡಿ ಪಾತ್ರ ಇಲಾಖೆಯಲ್ಲಿ ದೊಡ್ಡದಿದೆ. ಆದರೆ, ವಂಚಕಿ ಐಶ್ವರ್ಯಾಗೌಡ ಈಗ ತನಿಖೆಯ ಹಾದಿಯನ್ನೇ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.