ಹಾಸನ: ಪ್ರೀತಿಸಿದ ಹುಡುಗಿ ಮದುವೆಗೆ ಒಪ್ಪಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಅರಸೀಕೆರೆ ಬೈರಗೊಂಡನಹಳ್ಳಿಯ ದರ್ಶನ್(22) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈತ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಪ್ರೀತಿಸಿದ್ದ ಯುವತಿಯನ್ನೇ ಮದುವೆಯಾಗಲು ನಿರ್ಧರಿಸಿದ್ದ. ಆದರೆ, ಯುವತಿ ಮದುವೆಗೆ ನಿರಾಕರಿಸಿದ್ದಳು. ಹೀಗಾಗಿ ಮನನೊಂದು ದರ್ಶನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಅಜ್ಜಿ ಮನೆಯಲ್ಲಿ ಇದ್ದು ಪದವಿ ಓದುತ್ತಿದ್ದ ಸಂದರ್ಭದಲ್ಲಿ ದರ್ಶನ್ ಗೆ ಯುವತಿಯೊಬ್ಬಳ ಮೇಲೆ ಪ್ರೀತಿಯಾಗಿತ್ತು. ಆದರೆ, ಯುವತಿ ದರ್ಶನ್ ಜೊತೆಗೆ ಪ್ರೀತಿಯಲ್ಲಿದ್ದಾಗಲೇ ಮತ್ತೋರ್ವ ಹುಡುಗನೊಂದಿಗೆ ಓಡಾಡುತ್ತಿದ್ದಳು ಎನ್ನಲಾಗಿದೆ. ಇದನ್ನು ದರ್ಶನ್ ಪ್ರಶ್ನಿಸಿದ್ದಾನೆ. ಆಗ ಯುವತಿ, ನನ್ನ ದಾರಿಗೆ ಅಡ್ಡ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾಳೆ. ಆದರೆ, ಯುವತಿ ಕೈ ಕೊಟ್ಟಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.