ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯಂತೆಯೇ, ಕಾಂಗ್ರೆಸ್ ನಲ್ಲೂ ಅಧಿಕಾರಕ್ಕಾಗಿ ಗುದ್ದಾಟ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಗಾದಿಯಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕರಸತ್ತು ನಡೆಯುತ್ತಿದೆ. ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಸಮಾವೇಶ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು. ಪ್ರಿಯಾಂಕ್ ಖರ್ಗೆ ಕಾರಿನಲ್ಲೇ ಕುಳಿತು ಅವರು ತೆರಳಿದ್ದರು. ಇದೇ ವೇಳೆ ದಲಿತ ಸಮುದಾಯಗಳ ಬಲ ಪ್ರದರ್ಶನಕ್ಕಾಗಿ, ಎಸ್ಸಿ ಎಸ್ಟಿ ಸಮುದಾಯಗಳ ಸಮಾವೇಶದ ಅಗತ್ಯವಿದೆ ಎಂದು ಪರಮೇಶ್ವರ್ ಅವರು ಖರ್ಗೆ ಅವರಿಗೆ ಮನವರಿಕೆ ಮಾಡಿದ್ದರು. ಇದಕ್ಕೆ ಖರ್ಗೆ ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಎಸ್ಸಿ ಎಸ್ಟಿ ಸಮುದಾಯಗಳ ಸಮಾವೇಶ ನಡೆದರೆ ಬಲ ಪ್ರದರ್ಶನ ಮಾಡಿದಂತಾಗುತ್ತದೆ. ಇದರೊಂದಿಗೆ ರಾಜ್ಯದಲ್ಲಿ ಮತ್ತೆ ದಲಿತ ನಾಯಕ ಸಿಎಂ ಆಗಬೇಕು ಎಂಬ ಕೂಗು ಕೇಳಿಬರುತ್ತದೆ. ಇದಕ್ಕೂ ಮೊದಲು ದಲಿತ ಶಾಸಕರು-ಸಚಿವರ ಡಿನ್ನರ್ ಪಾರ್ಟಿಗೆ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಮೂಲಕ ತಡೆ ತಂದಿದ್ದರು. ಈಗ ಸಮಾವೇಶ ನಡೆಸಲು ಮುಂದಾದರೆ, ಯಾರೂ ತಡೆಯಲು ಆಗುವುದಿಲ್ಲ ಎಂಬುದು ಪರಮೇಶ್ವರ್ ಅವರ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ.