ಬೆಂಗಳೂರು: ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡುವುದು ಕೂಡ ಈಗ ಅಪಾಯಕಾರಿಯಾಗಿದೆ. ವಂಚಕರು ನಾವು ಎಟಿಎಂ ಕಾರ್ಡ್ ಹಾಕಿ, ಪಿನ್ ನಮೂದಿಸುವುದನ್ನು ವಂಚನೆ ಮೂಲಕ ಲಪಟಾಯಿಸಿ, ನಮ್ಮ ಹಣವನ್ನು ಎಗರಿಸುವ ಪ್ರಕರಣಗಳು ಆಗಾಗ ಸುದ್ದಿಯಾಗುತ್ತವೆ. ಇನ್ನು, ಕೆಲವೊಮ್ಮೆ ಎಟಿಎಂ ಕಾರ್ಡ್ ಮನೆಯಲ್ಲೇ ಬಿಟ್ಟು ಹೋದಾಗ ಹೇಗಪ್ಪಾ ಹಣ ವಿತ್ ಡ್ರಾ ಮಾಡುವುದು ಎಂಬ ಸಮಸ್ಯೆ ಕಾಡುತ್ತದೆ. ಆದರೆ, ಈಗ ಡೆಬಿಟ್ ಕಾರ್ಡ್ ಇಲ್ಲದೆಯೇ ಎಟಿಎಂಗಳಲ್ಲಿ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಹೇಗಂತೀರಾ? ಇಲ್ಲಿದೆ ಮಾಹಿತಿ.
ಹೌದು, ದೇಶಾದ್ಯಂತ ಬಹುತೇಕ ಬ್ಯಾಂಕ್ ಗಳು ಯುಪಿಐ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾವಲ್ ಸೌಲಭ್ಯವನ್ನು ಜಾರಿಗೆ ತಂದಿದೆ. ಇದರ ಅನ್ವಯ ಗ್ರಾಹಕರು ಫೋನ್ ಪೇ, ಗೂಗಲ್ ಪೇ ಸೇರಿ ಹಲವು ಪೇಮೆಂಟ್ ಅಗ್ರಿಗೇಟರ್ ಗಳನ್ನು ಬಳಸುವ ಮೂಲಕ ಎಂಟಿಎಂನಿಂದ ಕಾರ್ಡ್ ಇಲ್ಲದೆ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಹಣ ವಿತ್ ಡ್ರಾ ಮಾಡಲು ಇದು ಸುಲಭವಾದ ಮಾರ್ಗವೂ ಆಗಿದೆ.
ಯುಪಿಐ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾವಲ್ ಸೌಲಭ್ಯದ ಅನ್ವಯ ಗ್ರಾಹಕರು ಗರಿಷ್ಠ 10 ಸಾವಿರ ರೂಪಾಯಿವರೆಗೆ ಕಾರ್ಡ್ ಇಲ್ಲದೆ ಹಣವನ್ನು ಡ್ರಾ ಮಾಡಬಹುದಾಗಿದೆ. ಇಂತಹ ಮಾರ್ಗದಿಂದ ವಂಚಕರು ನಮ್ಮ ಹಣವನ್ನು ಲಪಟಾಯಿಸುವುದರಿಂದಲೂ ತಡೆಯಬಹುದಾಗಿದೆ.
ಹಣ ವಿತ್ ಡ್ರಾ ಮಾಡುವುದು ಹೇಗೆ?
- ನಿಮ್ಮ ಸಮೀಪದ ಯುಪಿಐ ಬೆಂಬಲಿತ ಎಟಿಎಂಗೆ ತೆರಳಿ
- ಎಟಿಎಂ ಪರದೆ ಮೇಲೆ ಯುಪಿಐ ಕ್ಯಾಶ್ ವಿತ್ ಡ್ರಾವಲ್ ಅಥವಾ ಐಸಿಸಿಡಬ್ಲ್ಯೂ ಎಂಬ ಆಯ್ಕೆ ಮೇಲೆ ಪ್ರೆಸ್ ಮಾಡಿ
- ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿ
- ಆಗ ಎಟಿಎಂನಲ್ಲಿ ಡಿಸ್ ಪ್ಲೇ ಆಗುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ
- ನಿಮ್ಮ ಯುಪಿಐ ಆ್ಯಪ್ ನಲ್ಲಿ ಪಿನ್ ಕೋಡ್ ನಮೂದಿಸಿ, ಬಳಿಕ ಹಣ ಪಡೆಯಿರಿ
ಇದನ್ನೂ ಓದಿ : ಬೆಂಗಳೂರು | ಏರ್ಪೋಟ್ ನಲ್ಲಿ ಸಾಮೂಹಿಕ ನಮಾಜ್ ; ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶ



















