ಬೆಂಗಳೂರು: ತಿಂಗಳಿಗೆ 80 ಸಾವಿರ ರೂಪಾಯಿಂದ 1 ಲಕ್ಷ ರೂಪಾಯಿ ಸಂಬಳ ಇರುತ್ತದೆ. ಇಲ್ಲವೇ, ಇಷ್ಟೇ ಆದಾಯ ಬರುವ ವ್ಯಾಪಾರ ಇರುತ್ತದೆ. ಇಷ್ಟಾದರೂ, ಕೈಯಲ್ಲಿ ದುಡ್ಡು ಉಳಿಯೋದಿಲ್ಲೆ ಎಂಬುದು ಹೆಚ್ಚಿನ ಜನರ ದೂರಾಗಿರುತ್ತದೆ. ಆದರೆ, ಇಷ್ಟೇ ಸಂಬಳ ಅಥವಾ ಆದಾಯದಲ್ಲಿಯೇ ನಿಯಮಿತ ಉಳಿತಾಯ ಮಾಡುವ ಮೂಲಕ ಕೇವಲ 10 ವರ್ಷದಲ್ಲಿಯೇ ಒಂದು ಕೋಟಿ ರೂಪಾಯಿ ಗಳಿಸಬಹುದಾಗಿದೆ. ಅರೆ ಹೇಗೆ ಅಂತೀರಾ? ಇಲ್ಲಿದೆ ವಿವರಣೆ.
ಹೌದು, ಮ್ಯೂಚುವಲ್ ಫಂಡ್ ಎಸ್ಐಪಿ ಮೂಲಕ 10 ವರ್ಷದಲ್ಲೇ 1 ಕೋಟಿ ರೂ. ಗಳಿಸಬಹುದಾಗಿದೆ. ನೀವು ಒಂದು ಕೋಟಿ ರೂ. ಗಳಿಸಲು ಪ್ರತಿ ತಿಂಗಳು 37,200 ರೂಪಾಯಿ ಹೂಡಿಕೆ ಮಾಡಬೇಕು. ಹಾಗೆಯೇ, ಪ್ರತಿ ವರ್ಷವೂ ಎಸ್ಐಪಿ ಮೊತ್ತವನ್ನು ಶೇ.5ರಷ್ಟು ಏರಿಕೆ ಮಾಡಬೇಕು. ಇದಕ್ಕೆ ಕನಿಷ್ಠ ಶೇ.12ರಷ್ಟು ರಿಟರ್ನ್ಸ್ ಎಂದರೂ10 ವರ್ಷದಲ್ಲಿ ಒಂದು ಕೋಟಿ ರೂ. ಗಳಿಸಬಹುದಾಗಿದೆ.
ತಿಂಗಳಿಗೆ 37,200 ರೂಪಾಯಿ ಎಸ್ಐಪಿಯನ್ನು ವಾರ್ಷಿಕ ಶೇ.5ರಷ್ಟು ಸ್ಟೆಪ್ ಅಪ್ ಎಸ್ಐಪಿ ಮಾಡಿದರೆ, 10 ವರ್ಷದಲ್ಲಿ ನೀವು 56.14 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಇದಕ್ಕೆ ಶೇ.12ರಷ್ಟು ರಿಟರ್ನ್ಸ್ ಎಂದರೂ, 44.05 ಲಕ್ಷ ರೂಪಾಯಿ ರಿಟರ್ನ್ಸ್ ಲಾಭ ಸಿಗುತ್ತದೆ. ಅಲ್ಲಿಗೆ, 10 ವರ್ಷದಲ್ಲಿ ನೀವು 1 ಕೋಟಿ ರೂಪಾಯಿ ನಿಧಿ ಸಂಗ್ರಹಿಸಬಹುದಾಗಿದೆ.
ಹೀಗೆ ನಿಯಮಿತ ಹೂಡಿಕೆ ಮಾಡಿದರೆ, 10 ವರ್ಷದಲ್ಲಿ ಮಕ್ಕಳ ಉನ್ನತ ಶಿಕ್ಷಣ, ಮಗಳ ಮದುವೆ ಸೇರಿ ಹಲವು ಕಾರಣಗಳಿಗೆ ಹಣವನ್ನು ಬಳಸಬಹುದಾಗಿದೆ. ಇದೇ ರೀತಿ 20 ವರ್ಷ ಹೂಡಿಕೆ ಮಾಡಿದರೆ, ನಿವೃತ್ತಿ ಜೀವನವನ್ನೂ ಉತ್ತಮವಾಗಿ ಸಾಗಿಸಬಹುದಾಗಿದೆ.
ಗಮನಿಸಿ: ಮ್ಯೂಚುವಲ್ ಫಂಡ್ ಹೂಡಿಕೆಯು ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿರುತ್ತದೆ. ಹಾಗಾಗಿ, ಇದು ರಿಸ್ಕ್ ಆಧಾರಿತ ಹೂಡಿಕೆಯಾಗಿದೆ. ನಾವು ನಿಮಗೆ ಮಾಹಿತಿ ನೀಡುವ ದೃಷ್ಟಿಯಿಂದ ಲೇಖನವನ್ನು ಪ್ರಕಟಿಸಿದ್ದೇವೆಯೇ ಹೊರತು, ಇದು ನಿಮಗೆ ಮಾಡುತ್ತಿರುವ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗಾಗಿ ತಜ್ಞರ ಸಲಹೆ-ಸೂಚನೆಗಳನ್ನು ಪಡೆಯುವುದನ್ನು ಮರೆಯದಿರಿ.