ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಇಳಿಕೆ ಮಾಡಿದ ಕಾರಣ ಬಹುತೇಕ ಬ್ಯಾಂಕ್ ಗಳು ಎಫ್ ಡಿ ಮೇಲಿನ ಬಡ್ಡಿದರ ಇಳಿಸಿವೆ. ಹಾಗಾಗಿ, ಬ್ಯಾಂಕ್ ಎಫ್ ಡಿ ಮೇಲೆ ಶೇ.7ರವರೆಗೆ ಬಡ್ಡಿ ಸಿಕ್ಕರೆ ಅದೇ ಹೆಚ್ಚು. ಆದರೆ, ಬ್ಯಾಂಕ್ ಎಫ್ ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುವ ಉಳಿತಾಯ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಇದೆ.
ಹೌದು, ಪೋಸ್ಟ್ ಆಫೀಸಿನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು (NSC) ಬ್ಯಾಂಕ್ ಎಫ್ ಡಿಗಿಂತ ಹೆಚ್ಚು ಬಡ್ಡಿ ನೀಡುತ್ತದೆ. ಪ್ರಸ್ತುತ 7.7% ರ ಬಡ್ಡಿದರವು ಅನೇಕ ಬ್ಯಾಂಕ್ ಸ್ಥಿರ ಠೇವಣಿ (FD) ಯೋಜನೆಗಳಿಗಿಂತಲೂ ಹೆಚ್ಚಾಗಿದೆ. ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ, ಅಂದರೆ ಗಳಿಸಿದ ಬಡ್ಡಿಯ ಮೇಲೂ ಮುಂದಿನ ವರ್ಷ ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ ಮೊತ್ತವು ಆದಾಯ ತೆರಿಗೆ ಧಾರಾವು 80Cಯ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಪ್ರತಿ ಹಣಕಾಸು ವರ್ಷದಲ್ಲಿ ರೂ. 1.5 ಲಕ್ಷದವರೆಗಿನ ಹೂಡಿಕೆಗೆ ಈ ಕಡಿತ ಲಭಿಸುತ್ತದೆ. ಹೂಡಿಕೆಯಲ್ಲಿ ನಮ್ಯತೆ: ಕನಿಷ್ಠ ರೂ. 1,000 ಮಾತ್ರ ಹೂಡಿಕೆ ಮಾಡಿ NSC ಖಾತೆ ತೆರೆಯಬಹುದು. ಗರಿಷ್ಠ ಹೂಡಿಕೆ ಮಿತಿಯೇ ಇಲ್ಲದಿರುವುದರಿಂದ, ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಇದು ಅನುಕೂಲಕರವಾಗಿದೆ.
ಉದಾಹರಣೆಗೆ ನೀವು, ಮಾಸಿಕ 2 ಸಾವಿರ ರೂ.ನಂತೆ 5 ವರ್ಷಗಳಿಗೆ ಹೂಡಿಕೆ ಮಾಡಿದರೆ, ಒಳ್ಳೆಯ ಲಾಭ ಗಳಿಸಬಹುದು. 5 ವರ್ಷದಲ್ಲಿ ನೀವು 1.2 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಇದಕ್ಕೆ ಶೇ.7.7ರಷ್ಟು ರಿಟರ್ನ್ಸ್ ಎಂದರೆ, 53 ಸಾವಿರ ರೂಪಾಯಿ ಬಡ್ಡಿ ಸೇರಿ ಒಟ್ಟು 1.73 ಲಕ್ಷ ರೂ. ಪಡೆಯಬಹುದಾಗಿದೆ.