ಬೆಂಗಳೂರು: ಲಕ್ಷಾಂತರ ರೂಪಾಯಿ ವಹಿವಾಟು ಇರುತ್ತದೆ. ಹಣವನ್ನು ಪ್ರತಿ ಬಾರಿಯೂ ಕ್ಯಾಶ್ ಅಲ್ಲಿ ಕೊಡಲು ಆಗುವುದಿಲ್ಲ. ಮೊಬೈಲ್ ನಲ್ಲಿ ಟ್ರಾನ್ಸ್ ಫರ್ ಮಾಡಲೂ ಆಗೋದಿಲ್ಲ. ಆಗೆಲ್ಲ, ಹೆಚ್ಚಿನ ಜನ ಚೆಕ್ ಬರೆದು ಕೊಡುತ್ತಾರೆ. ಕೆಲವೊಂದು ಸಲ ನಾಳೆ ದುಡ್ಡು ಬರೋದಿರುತ್ತದೆ. ಅಲ್ಲಿಯತನಕ ಎಂದು ಬೇರೆಯವರಿಗೆ ಚೆಕ್ ಬರೆದು ಕೊಡುವವರೂ ಇದ್ದಾರೆ. ಆದರೆ, ಹೀಗೆ ಕೊಟ್ಟ ಚೆಕ್ ಬೌನ್ಸ್ ಆದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ, ಚೆಕ್ ಬೌನ್ಸ್ ಆದ್ರೆ ಏನೆಲ್ಲ ಆಗುತ್ತೆ? ಚೆಕ್ ಬರೆಯುವ ಮುನ್ನ ಏಕೆ ಎಚ್ಚರದಿಂದ ಇರಬೇಕು ಎಂಬುದರ ಮಾಹಿತಿ ಇಲ್ಲಿದೆ.
ಕೇಸ್ ಜಡಿಯಬಹುದು
ನೀವು ಯಾವ ವ್ಯಕ್ತಿಗೆ ಚೆಕ್ ಕೊಟ್ಟಿದ್ದೀರೋ, ಆ ವ್ಯಕ್ತಿ ಅಥವಾ ಸಂಸ್ಥೆ, ನಿಮ್ಮ ಮೇಲೆ ನೇರವಾಗಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಬಹುದು. ಇದೊಂದು ಕ್ರಿಮಿನಲ್ ಅಪರಾಧದ ಅಡಿಯಲ್ಲಿ ಬರುತ್ತದೆ. ಒಮ್ಮೆ ಕೇಸ್ ಕೋರ್ಟ್ ಗೆ ಹೋಯಿತೆಂದರೆ, ನ್ಯಾಯಾಲಯ ನಿಮ್ಮಿಂದ ಹಣ ವಸೂಲಿ ಮಾಡಲು ಆದೇಶಿಸುತ್ತದೆ. ನಿಮಗೆ ಶಿಕ್ಷೆಯೂ ಆಗಬಹುದು.
ಬ್ಯಾಂಕ್ ಕ್ರಮ ತೆಗೆದುಕೊಳ್ಳುತ್ತದೆ
ನೀವು ನೀಡುವ ಚೆಕ್ ಪದೇಪದೆ ಬೌನ್ಸ್ ಆದರೆ, ನೀವು ವಿಶ್ವಾಸಾರ್ಹ ವ್ಯಕ್ತಿ ಅಲ್ಲ ಎಂಬುದು ಗೊತ್ತಾದರೆ, ಬ್ಯಾಂಕ್ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನಿಮ್ಮ ಓವರ್ಡ್ರಾಫ್ಟ್ ಸೌಲಭ್ಯವನ್ನು ಬ್ಲಾಕ್ ಮಾಡಬಹುದು, ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಅನ್ನು ದಿಢೀರ್ ಕಡಿಮೆ ಮಾಡಬಹುದು, ಅಷ್ಟೇ ಏಕೆ, ನಿಮ್ಮ ಖಾತೆಯನ್ನೇ ಸ್ಥಗಿತಗೊಳಿಸುವ ಹಕ್ಕು ಕೂಡ ಬ್ಯಾಂಕಿಗೆ ಇದೆ.
ಸಾಲ ಸಿಗೋದಿಲ್ಲ
ಚೆಕ್ ಬೌನ್ಸ್ ಆದ ನಂತರ ನಿಮ್ಮ CIBIL ಸ್ಕೋರ್ ಪಾತಾಳಕ್ಕೆ ಕುಸಿದಿರುತ್ತದೆ. ನೀವು ಭವಿಷ್ಯದಲ್ಲಿ ಗೃಹ ಸಾಲ, ವಾಹನ ಸಾಲ ಅಥವಾ ಯಾವುದೇ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, ಬ್ಯಾಂಕುಗಳು ನಿಮ್ಮ ಅರ್ಜಿಯನ್ನು ತಕ್ಷಣ ತಿರಸ್ಕರಿಸುತ್ತವೆ. ಚೆಕ್ ಬೌನ್ಸ್ ಪ್ರಕರಣ ನಿಮ್ಮ CIBIL ವರದಿಯಲ್ಲಿ ನೇರವಾಗಿ ಕಾಣಿಸದಿದ್ದರೂ, ನಿಮ್ಮನ್ನು ‘ಅತಿ ಅಪಾಯಕಾರಿ ಗ್ರಾಹಕ’ ಎಂದು ಗುರುತಿಸಿರುವುದರಿಂದ, ಯಾವ ಬ್ಯಾಂಕೂ ನಿಮಗೆ ಸಾಲ ಕೊಡೋದಿಲ್ಲ. ಹಾಗಾಗಿ, ಚೆಕ್ ಬರೆಯುವ ಮುನ್ನ ಎಚ್ಚರದಿಂದ ಇರಬೇಕು.