ಬೆಂಗಳೂರು : ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಇದರ ಮಧ್ಯೆಯೇ, ಕೆಲವು ವಿಶೇಷ ಪ್ರಕರಣಗಳು, ಸಂದರ್ಭಗಳು ಇರುವವರಿಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿಶೇಷ ಪ್ರಕರಣಗಳು ಎಂದು ಪರಿಗಣಿಸಿ ಕೇವಲ 15 ದಿನಗಳಲ್ಲಿ ಹೊಸಬರಿಗೆ ರೇಷನ್ ಕಾರ್ಡ್ ನೀಡಲಾಗುತ್ತದೆ. ಇದಕ್ಕಾಗಿ ಅರ್ಜಿ ಸಲ್ಲಿಸುವವರ ಬಳಿ ಸಮರ್ಪಕ ದಾಖಲೆ ಇದ್ದರೆ ಸಾಕು.
ಯಾರೆಲ್ಲ ಅರ್ಹರು?
ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ, ಇ-ಶ್ರಮ್ ಕಾರ್ಡ್ ಹೊಂದಿರುವ ಕಾರ್ಮಿಕರು, ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು (ವೈದ್ಯಕೀಯ ತುರ್ತು ಪರಿಸ್ಥಿತಿ), ಕುಟುಂಬದ ಆದಾಯ ಕಡಿಮೆ ಇರುವ ನಿರ್ದಿಷ್ಟ ಬುಡಕಟ್ಟು ಸಮುದಾಯದವರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಇತ್ತೀಚೆಗೆ ಮದುವೆಯಾದ ದಂಪತಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಯಾವೆಲ್ಲ ದಾಖಲೆ ಬೇಕು?
ಇ-ಶ್ರಮ್ ಕಾರ್ಡ್, ಕುಟುಂಬ ಸದಸ್ಯರ ಆಧಾರ್ ಕಾರ್ಡ್, ವಿಳಾಸದ ದಾಖಲೆ, ಆದಾಯ, ಜಾತಿ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ ಫೋಟೊ, ವೈದ್ಯಕೀಯ ಪ್ರಮಾಣಪತ್ರಗಳು, 6 ವರ್ಷದೊಳಗಿನ ಮಕ್ಕಳಾಗಿದ್ದರೆ ಜನನ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳನ್ನು ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಬಯಸುವವರು https://ahara.karnataka.gov.in/ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ತಹಸೀಲ್ದಾರ್ ಕಚೇರಿಗೆ ತೆರಳಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2026ರ ಮಾರ್ಚ್ 31ರವರೆಗೆ ಮಾತ್ರ ಅವಕಾಶವಿದೆ. ಹಳೆಯ ಕಾರ್ಡ್ ಇದ್ದವರು ಇದೇ ಅವಧಿಯೊಳಗೆ ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : ಬಾಂಗ್ಲಾದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಕೊಂದು, ಮರಕ್ಕೆ ನೇತು ಹಾಕಿದ್ದ ಕೇಸ್ | ದಿಲ್ಲಿಯಲ್ಲಿ ಓರ್ವನ ಬಂಧನ!



















