ಬೆಂಗಳೂರು: ಬಡವರು, ಅಸಂಘಟಿತ ವಲಯಗಳ ಕಾರ್ಮಿಕರು ಸೇರಿ ಲಕ್ಷಾಂತರ ಜನರಿಗೆ ಹಣಕಾಸು ನೆರವು ನೀಡುವ ದಿಸೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಆದರೆ, ಹೆಚ್ಚಿನ ಜನರಿಗೆ ಯೋಜನೆ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೀಗೆ, ಹೆಚ್ಚಿನ ಜನರಿಗೆ ಗೊತ್ತಿಲ್ಲದ ಯೋಜನೆ ಅಂದರೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮದುವೆ ಸಹಾಯ ಧನ ಯೋಜನೆ. ಹೌದು, ಮದುವೆ ವೆಚ್ಚಗಳಿಗಾಗಿ ರಾಜ್ಯ ಸರ್ಕಾರವು 60 ಸಾವಿರ ರೂ. ಸಹಾಯಧನ ನೀಡುತ್ತದೆ.
ಕರ್ನಾಟಕ ಸರ್ಕಾರವು ನೋಂದಾಯಿತ ಕಾರ್ಮಿಕರು ಅಥವಾ ಅವರ ಮಕ್ಕಳ ಮದುವೆಗೆ 60 ಸಾವಿರ ರೂ. ಸಹಾಯಧನ ನೀಡುತ್ತದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಹಣಕಾಸು ನೆರವು ಒದಗಿಸುತ್ತಿದೆ. ನೋಂದಣಿ ಮಾಡಿಕೊಂಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವಿವಾಹದ ಸಮಯದಲ್ಲಿ ಆರ್ಥಿಕ ಬೆಂಬಲ ನೀಡಿ ಅವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ರಾಜ್ಯದ ಕಟ್ಟಡ ಅಥವಾ ಯಾವುದೇ ಬಗೆಯ ನಿರ್ಮಾಣ ಕಾರ್ಮಿಕರು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಒಬ್ಬ ಕಾರ್ಮಿಕ ತನ್ನ ಅಥವಾ ತನ್ನ ಮಕ್ಕಳ ಮದುವೆಗಾಗಿ ಗರಿಷ್ಠ ಎರಡು ಬಾರಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಸಹಾಯಧನದ ಹಣವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಮದುವೆಯಾದ 6 ತಿಂಗಳೊಳಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಕಾರ್ಮಿಕ ಇಲಾಖೆಯ ವೆಬ್ ಸೈಟ್ https://karbwwb.karnataka.gov.in/kn ಗೆ ಭೇಟಿ ನೀಡಬೇಕು. ಹೊಸ ಬಳಕೆದಾರರು ಮೊದಲು ನೋಂದಾಯಿಸಿಕೊಳ್ಳಬೇಕು ಅಥವಾ ಈಗಾಗಲೇ ನೋಂದಾಯಿಸಿಕೊಂಡಿದ್ದರೆ ಲಾಗಿನ್ ಆಗಬೇಕು. ಯೋಜನೆಗಳು ವಿಭಾಗದಲ್ಲಿ ಮದುವೆ ಸಹಾಯಧನ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ವೈಯಕ್ತಿಕ ಮತ್ತು ಮದುವೆಯ ವಿವರಗಳನ್ನು ನಮೂದಿಸಬೇಕು. ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ನಿಮ್ಮ ಜಿಲ್ಲೆಯ ಕಾರ್ಮಿಕ ಕಚೇರಿ ಅಥವಾ ಕಲ್ಯಾಣ ಮಂಡಳಿ ಕಚೇರಿಗೆ ಭೇಟಿ ನೀಡಬೇಕು.


















