ದುಬೈ : 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಫೈನಲ್‌ನಲ್ಲಿ ಭಾರತವನ್ನು ಸೋಲಿಸಲು ನ್ಯೂಜಿಲೆಂಡ್‌ಗೆ ಪಾಕಿಸ್ತಾನದ ವೇಗದ ಬೌಲಿಂಗ್ ದಿಗ್ಗಜ ಶೋಯೆಬ್ ಅಖ್ತರ್ (Shoaib Akhtar) ಮಹತ್ವದ ಸಲಹೆ ನೀಡಿದ್ದಾರೆ. ಭಾನುವಾರ (ಮಾರ್ಚ್ 9) ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಈ ಮಹತ್ವದ ಪಂದ್ಯದಲ್ಲಿ ಭಾರತವು ಬಲಿಷ್ಠ ತಂಡವಾಗಿ ಕಾಣುತ್ತಿದೆ. ಯಾಕೆಂದರೆ ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಜಯ ಸಾಧಿಸಿರುವ ಉತ್ಸಾಹವಿದೆ. ಸೆಮಿಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತ್ತು, ಇನ್ನು ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ನ್ಯೂಜಿಲೆಂಡ್ ತಂಡ, ಐಸಿಸಿ ನಾಕ್ಔಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಇತಿಹಾಸವಿದೆ. 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ್ದ ಕಿವೀಸ್, 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿಯೂ ಭಾರತವನ್ನು ಮಣಿಸಿತ್ತು. 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕೂಡಾ ಭಾರತವು ಕಿವೀಸ್ ಎದುರು ಮಂಡಿಯೂರಿತ್ತು. ಈ ಹಿಂದಿನ ಯಶಸ್ಸನ್ನು ನೋಡಿದರೆ ನ್ಯೂಜಿಲೆಂಡ್ ವಿಶ್ವಾಸದಲ್ಲಿದೆ.
ಅಖ್ತರ್‌ನ ಸಲಹೆ ಏನು?
ನ್ಯೂಜಿಲೆಂಡ್ ತಂಡಕ್ಕೆ ರಣತಂತ್ರ ಹೂಡುವ ಬಗ್ಗೆ ಪಾಕಿಸ್ತಾನದ ಮಾಜಿ ಬೌಲರ್‌ಗಳು ಶೋಯೆಬ್ ಅಖ್ತರ್ ಮತ್ತು ಶೋಯೆಬ್ ಮಲಿಕ್ ಚರ್ಚೆ ನಡೆಸಿದ್ದಾರೆ. “ನಿಮ್ಮ ಸಾಮರ್ಥ್ಯದ ಮೇಲೆ ನೀವು ನಂಬಿಕೆ ಇಡಬೇಕು. ನಾವು ದುರ್ಬಲ ತಂಡವೆಂಬ ಭಾವನೆ ಬಿಟ್ಟು, ಜಯ ಸಾಧಿಸುವ ವಿಶ್ವಾಸವನ್ನು ಬೆಳೆಸಬೇಕು” ಎಂದು ಅವರು ನ್ಯೂಜಿಲೆಂಡ್ ತಂಡಕ್ಕೆ ಸಲಹೆ ನೀಡಿದ್ದಾರೆ. ವಿಶೇಷವಾಗಿ ನಾಯಕ ಮಿಚೆಲ್ ಸ್ಯಾಂಟ್ನರ್ ತಂಡವನ್ನು ಸರಿಯಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತವನ್ನು ಮಣಿಸಲು ಎ A-ಗೇಮ್ ತರುವ ಅಗತ್ಯ
“ನೀವು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗಿದ್ದು, ನಿಮ್ಮ ಸ್ಪಿನ್ನರ್‌ಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಿಚೆಲ್ ಸ್ಯಾಂಟ್ನರ್ ಬುದ್ಧಿವಂತಿಕೆಯಿಂದ ಬೌಲಿಂಗ್ ಆಯ್ಕೆ ಮಾಡಬೇಕಾಗಿದೆ. ಭಾರತ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಆದರೆ ನ್ಯೂಜಿಲೆಂಡ್ ತನ್ನ ಶ್ರೇಷ್ಠ ಆಟ ಪ್ರದರ್ಶಿಸಿದರೆ ಭಾರತವನ್ನು ಸೋಲಿಸಬಹುದು ,” ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಭಾನುವಾರದ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವು ಅಖ್ತರ್ ಸಲಹೆಯನ್ನು ಪಾಲಿಸುತ್ತದೆಯಾ ಕಾದು ನೋಡಬೇಕಾಗಿದೆ!