ಬೆಂಗಳೂರು: ಹುಟ್ಟಿದೂರಿನಲ್ಲೇ ಒಂದು ನ್ಯಾಯಬೆಲೆ ಅಂಗಡಿ ತೆರೆಯಬೇಕು. ಆ ಮೂಲಕ ನಾವು ಉದ್ಯೋಗ ಪಡೆಯುವ ಜತೆಗೆ ಜನರಿಗೆ ಪಡಿತರ ಹಂಚಬೇಕು ಎಂದು ಬಯಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ರಾಜ್ಯದಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸುವ ಮೂಲಕ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅನುಮತಿ ಪಡೆಯಬಹುದಾಗಿದೆ.
ರಾಜ್ಯದ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ನ್ಯಾಯಬೆಲೆ ಅಂಗಡಿಗಳನ್ನು ನಿರ್ವಹಿಸುತ್ತದೆ. ಈ ಅಂಗಡಿಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಮೂಲಕ ಆಹಾರ ಧಾನ್ಯಗಳು, ಸಕ್ಕರೆ, ಎಣ್ಣೆ ಮತ್ತು ಇತರ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುತ್ತವೆ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಒಳ್ಳೆಯ ಆದಾಯ ಪಡೆಬಹುದಾಗಿದೆ. ಈ ಅಂಗಡಿಗಳನ್ನು ನಿರ್ವಹಿಸುವ ಸಂಘಗಳು ಮತ್ತು ವ್ಯಕ್ತಿಗಳಿಗೆ ಸ್ಥಿರ ಆದಾಯದ ಮೂಲವನ್ನು ಒದಗಿಸುವ ಈ ಯೋಜನೆಯು, ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ.
ನ್ಯಾಯಬೆಲೆ ಅಂಗಡಿಯನ್ನು ನಿರ್ವಹಿಸುವವರಿಗೆ ತಿಂಗಳಿಗೆ ಇಂತಿಷ್ಟು ಹಣ ಪಾವತಿ ಮಾಡುವುದರ ಜತೆಗೆ ಆ ಭಾಗದಲ್ಲಿರುವ ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಗೌರವ ಧನ ನೀಡಲಾಗುತ್ತದೆ. ಪ್ರಸ್ತುತ ರಾಜ್ಯಾದ್ಯಂತ ಪಡಿತರ ವಿತರಣಾ ವ್ಯವಸ್ಥೆಯು ಸಂಪೂರ್ಣ ಗಣಕೀಕರಣ ಮಾಡಲಾಗಿದ್ದು ಅರ್ಜಿ ಸಲ್ಲಿಸುವ ಪ್ರತಿನಿಧಿಯು ಕಂಪ್ಯೂಟರ್ ಜ್ಞಾನ ಹೊಂದಿರುವುದು ಅತ್ಯವಶಕವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ತಾಲೂಕಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಗೆ ತೆರಳಬೇಕು. ಅಲ್ಲಿ, ನಮೂನೆ-ಎ ಅರ್ಜಿಯನ್ನು ಪಡೆದು ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ನಿಮ್ಮ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ತೆರಳಿ ಸಲ್ಲಿಸಬೇಕು. ಆಹಾರ ಇಲಾಖೆಯು ಹೊಸ ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಲು ಅರ್ಹ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದೆ.