ಬೆಂಗಳೂರು: ಗ್ರಾಮೀಣ ಪ್ರದೇಶಗಳ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ರಾಜ್ಯ ಸರ್ಕಾರದ ಸೇವೆ ಸಿಗುವಂತಾಗಲಿ ಎಂದು ರಾಜ್ಯ ಸರ್ಕಾರವು ಗ್ರಾಮ ಒನ್ ಯೋಜನೆ ಜಾರಿಗೆ ತಂದಿದೆ. ಗ್ರಾಮ ಒನ್ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ಸುಮಾರು 800 ಸೇವೆಗಳು ಲಭ್ಯ ಇವೆ. ಇದರ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಗ್ರಾಮ ಒನ್ ಯೋಜನೆ ಅಡಿಯಲ್ಲಿ ಫ್ರಾಂಚೈಸಿಗಳನ್ನು ಆರಂಭಿಸಲು ರಾಜ್ಯ ಸರ್ಕಾರವು ಅರ್ಹರಿಂದ ಅರ್ಜಿಗಳನ್ನು ಆರಂಭಿಸಿದೆ. ಆ ಮೂಲಕ ವಿದ್ಯಾವಂತ ಯುವಕ-ಯುವತಿಯರಿಗೆ ಹುಟ್ಟಿದೂರಿನಲ್ಲೇ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ಅವಕಾಶ ನೀಡಲಾಗಿದೆ.
ಮೈಸೂರು ವಿಭಾಗದ ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗೆಯೇ, ಕಲಬುರಗಿ ವಿಭಾಗದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಗ್ರಾಮಗಳಲ್ಲಿ ಫ್ರಾಂಚೈಸಿಗಳನ್ನು ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಫ್ರಾಂಚೈಸಿ ಪಡೆದವರಿಗೆ ಕಮಿಷನ್ ಆದಾಯ ಸಿಗುತ್ತದೆ. ಇದರಿಂದ ಗ್ರಾಮಗಳಲ್ಲಿಯೇ ಯುವಕ-ಯುವತಿಯರು ಉದ್ಯಮ ಆರಂಭಿಸಿ, ಹಣ ಗಳಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆ?
• ಪಿಯುಸಿ, ಡಿಪ್ಲೊಮಾ, ಐಟಿಐ, ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಬೇಸಿಕ್ ಜ್ಞಾನ ಇರಬೇಕು.
• ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಸುಮಾರು 1 ರಿಂದ 2 ಲಕ್ಷ ರೂ. ಬಂಡವಾಳ ಹೊಂದಿರಬೇಕು.
• ಕೇಂದ್ರ ಸ್ಥಾಪಿಸಲು ಆಯ್ಕೆಯಾದರ ಬಳಿಕ 5 ಸಾವಿರ ರೂ. ಭದ್ರತಾ ಠೇವಣಿ ನೀಡಬೇಕು. (ಇದು ಮರುಪಾವತಿ ಆಗುತ್ತದೆ)
• ಅರ್ಜಿದಾರರು ಕಡ್ಡಾಯವಾಗಿ ಪೊಲೀಸ್ ತಪಾಸಣೆ ಪ್ರಮಾಣ ಪತ್ರ ನೀಡಬೇಕು.
• ಗ್ರಾಮದಲ್ಲಿ 100 ಚದರ ಅಡಿ ವಿಸ್ತೀರ್ಣದ ಪ್ರತ್ಯೇಕ ಕೊಠಡಿ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ kal-mys.gramaone.karnataka.gov.in ಗೆ ಭೇಟಿ ನೀಡಬೇಕು
• New Registration ಆಪ್ಶನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಮತ್ತು ಇಮೇಲ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು.
• ನಿಮ್ಮ ವೈಯಕ್ತಿಕ ವಿವರ, ಶಿಕ್ಷಣ ಮತ್ತು ಕೇಂದ್ರ ಸ್ಥಾಪಿಸುವ ಗ್ರಾಮದ ಮಾಹಿತಿ ಒದಗಿಸಬೇಕು.
• ಗುರುತಿನ ಚೀಟಿ, ಶೈಕ್ಷಣಿಕ ದಾಖಲೆ, ಸ್ಥಳದ ಫೋಟೋ ಮತ್ತು ಪೊಲೀಸ್ ಪ್ರಮಾಣ ಪತ್ರಗಳ ಸಾಫ್ಟ್ ಕಾಪಿಗಳನ್ನು ಅಪ್ ಲೋಡ್ ಮಾಡಬೇಕು.
• 100 ರೂಪಾಯಿ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬೇಕು.
• Submit ಆಪ್ಶನ್ ಮೇಲೆ ಕ್ಲಿಕ್ ಮಾಡಿ, ಅರ್ಜಿಯ ರೆಫರೆನ್ಸ್ ನಂಬರ್ ಸೇವ್ ಮಾಡಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಬೆಂಗಳೂರಿನಲ್ಲಿರುವ IIMBಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ | ಡಿಪ್ಲೋಮಾ ಪಾಸಾಗಿದ್ದರೆ ಸಾಕು


















