ವಾಷಿಂಗ್ಟನ್: ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಜೆಲೆನ್ ಸ್ಕಿ ನಡುವೆ ನಡೆದ ವಾಗ್ವಾದ ಮತ್ತು ಜಟಾಪಟಿ ಬಗ್ಗೆ ರಷ್ಯಾ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು. ಇದೀಗ ರಷ್ಯಾದ ಪ್ರತಿಕ್ರಿಯೆ ಬಂದಿದ್ದು, ಕ್ರೆಮ್ಲಿನ್ ಅಧಿಕಾರಿಗಳು ಮತ್ತು ರಷ್ಯಾದ ಸರ್ಕಾರಿ ಮಾಧ್ಯಮಗಳು ಅಮೆರಿಕ ಅಧ್ಯಕ್ಷರ ಬೆನ್ನಿಗೆ ನಿಂತಿವೆ.
ಜೆಲೆನ್ ಸ್ಕಿ ಅವರು ಅಷ್ಟೊಂದು ದರ್ಪ ತೋರಿದರೂ, ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸದೇ ಇರುವ ಮೂಲಕ ಟ್ರಂಪ್ ಸಂಯಮವನ್ನು ತೋರಿಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಖರೋವಾ ಹೇಳಿದ್ದಾರೆ.
“2022ರಲ್ಲಿ ಉಕ್ರೇನ್ ಯಾರ ಬೆಂಬಲವೂ ಇಲ್ಲದೇ ಏಕಾಂಗಿಯಾಗಿತ್ತು ಎಂದು ಶ್ವೇತಭವನದಲ್ಲಿ ಪ್ರತಿಪಾದಿಸುವ ಮೂಲಕ ಜೆಲೆನ್ ಸ್ಕಿ ಅವರು ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದ್ದರು ” ಎಂದು ಝಖರೋವಾ ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ. “ಟ್ರಂಪ್ ಮತ್ತು ವ್ಯಾನ್ಸ್ ಅವರು ಆ ಕೊಳಕು ಮನುಷ್ಯನಿಗೆ ಹೊಡೆಯದೇ ಸುಮ್ಮನಿದ್ದುದು ಪವಾಡ ಮತ್ತು ಅವರ ಸಂಯಮವನ್ನು ತೋರಿಸುತ್ತದೆ. ಜೆಲೆನ್ ಸ್ಕಿ ಅವರು ತಮಗೆ ತುತ್ತಿಟ್ಟ ಕೈಯನ್ನೇ ಕಚ್ಚುತ್ತಿದ್ದಾರೆ” ಎಂದೂ ಝಕರೋವಾ ಹೇಳಿದ್ದಾರೆ. ಜೊತೆಗೆ, ಎಲ್ಲರೊಂದಿಗೂ ದುರ್ವರ್ತನೆ ತೋರುವುದು ಜೆಲೆನ್ ಸ್ಕಿಗೆ ಅಭ್ಯಾಸವಾಗಿಬಿಟ್ಟಿದೆ ಎಂದಿದ್ದಾರೆ.
ಇನ್ನೊಂದೆಡೆ, ರಷ್ಯಾದ ಭದ್ರತಾ ಮಂಡಳಿಯ ಉಪ ಮುಖ್ಯಸ್ಥ ಮತ್ತು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರೂ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಜೆಲೆನ್ ಸ್ಕಿ ಅವರನ್ನು “ಶ್ವೇತಭವನದಲ್ಲಿ ಸರಿಯಾದ ಕಪಾಳಮೋಕ್ಷ ಪಡೆದ ದುರಹಂಕಾರಿ ಹಂದಿ ಎಂದು ಜರೆದಿದ್ದಾರೆ. “ಮೊದಲ ಬಾರಿಗೆ, ಟ್ರಂಪ್ ಅವರು ಈ ಕೊಕೇನ್ ಕೋಡಂಗಿಯ ಮುಖಕ್ಕೆ ರಾಚುವಂತೆ ಮಾತನಾಡಿದರು: ಕೀವ್ ಆಡಳಿತವು ಮೂರನೇ ವಿಶ್ವಯುದ್ಧದೊಂದಿಗೆ ಆಟವಾಡುತ್ತಿದೆ. ಕೃತಜ್ಞತೆ ಇಲ್ಲದ ಹಂದಿಗೆ ಮಾಲೀಕರಿಂದ ಸರಿಯಾದ ಹೊಡೆತ ಬಿದ್ದಿದೆ. ಇದು ಸರಿಯಾದದ್ದು. ಆದರೆ ಇದು ಸಾಲುವುದಿಲ್ಲ – ನಾವು ಈ ನಾಜಿ ಆಡಳಿತಕ್ಕೆ ಯಂತ್ರಕ್ಕೆ ಮಿಲಿಟರಿ ನೆರವನ್ನು ಮೊದಲು ನಿಲ್ಲಿಸಬೇಕು” ಎಂದು ಮೆಡ್ವೆಡೆವ್ ಹೇಳಿದ್ದಾರೆ.
ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಅವರು ಟ್ರಂಪ್-ಜೆಲೆನ್ ಸ್ಕಿ ನಡುವಿನ ವಾಗ್ವಾದವನ್ನು “ಐತಿಹಾಸಿಕ” ಎಂದು ಬಣ್ಣಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಫೆಬ್ರವರಿ 18 ರಂದು ನಡೆದ ರಷ್ಯಾ-ಅಮೆರಿಕ ಮಾತುಕತೆಯಲ್ಲಿ ಮಾಸ್ಕೋದ ಸಮಾಲೋಚಕರಲ್ಲಿ ಒಬ್ಬರಾಗಿದ್ದ ಡಿಮಿಟ್ರಿವ್ ಅವರು, ಇಂದಿನ ಈ ಮುಖಾಮುಖಿಯನ್ನು ಅಮೆರಿಕದ ಬದಲಾದ ನೀತಿಯ ಸಂಕೇತ ಎಂದು ಕರೆದಿದ್ದಾರೆ. ಜೆಲೆನ್ ಸ್ಕಿ ಅವರು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಷ್ಯಾದ ಅಂತಾರಾಷ್ಟ್ರೀಯ ಮಾನವೀಯ ಸಹಕಾರ ಏಜೆನ್ಸಿಯ ಮುಖ್ಯಸ್ಥ ಯೆವ್ಗೆನಿ ಪ್ರಿಮಾಕೊವ್ ಆರೋಪಿಸಿದ್ದಾರೆ. “ಅಲ್ಲಿ ಏನಾಯಿತು ಎಂದು ಎಲ್ಲರೂ ನೋಡಿದ್ದಾರೆ. ಉಕ್ರೇನ್ ಆಡಳಿತದ ರಕ್ತದಲ್ಲಿರುವುದು ಪ್ರಚೋದನೆ, ರಕ್ತಸಿಕ್ತ ಪ್ರಚೋದನೆ ಮಾತ್ರ” ಎಂದಿದ್ದಾರೆ.
ಜಗತ್ತಿನ ಸಹಾನುಭೂತಿ ಪಡೆಯಲು ಮತ್ತು ರಷ್ಯಾವನ್ನು ದೂಷಿಸಲು ಕೀವ್ “ಶಾಂತಿಯುತ ನಾಗರಿಕರ ಸಾಮೂಹಿಕ ಸಾವುಗಳಿಗೆ” ಕಾರಣವಾಗುವಂಥ ಘಟನೆಗಳನ್ನು ಆಯೋಜಿಸಲೂಬಹುದು ಎಂದೂ ಅವರು ಹೇಳಿದ್ದಾರೆ.
ಇನ್ನು ರಷ್ಯಾದ ಸರ್ಕಾರಿ ಮಾಧ್ಯಮವೂ ಶ್ವೇತಭವನದಲ್ಲಿ ನಡೆದ ಘಟನೆ ಬಗ್ಗೆ ಹರ್ಷ ವ್ಯಕ್ತಪಡಿಸಿದೆ. “ಅಮೆರಿಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸುತ್ತಿಗೆಯ ಪೆಟ್ಟುಗಳು ಬೀಳುತ್ತಿರುವಾಗ ಜೆಲೆನ್ ಸ್ಕಿ ತಮ್ಮೆರೆಡು ಕೈಗಳನ್ನೂ ಕಾಲುಗಳ ನಡುವೆ ಇಟ್ಟುಕೊಂಡು ಕುಳಿತಿದ್ದರು” ಎಂದು ವ್ಯಂಗ್ಯವಾಡಿದೆ.
ಈ ಘಟನೆಯ ಬೆನ್ನಲ್ಲೇ ಐರೋಪ್ಯ ರಾಷ್ಟ್ರಗಳ ಅನೇಕ ನಾಯಕರು ಜೆಲೆನ್ ಸ್ಕಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಪುಟಿನ್ ಅವರ ದೀರ್ಘಕಾಲದ ಮಿತ್ರ ಹಂಗೇರಿ ಪ್ರಧಾನಿ ವಿಕ್ಟರ್ ಒರ್ಬಾನ್ ಮಾತ್ರ ಟ್ರಂಪ್ ಪರವಾಗಿ ನಿಂತಿದ್ದಾರೆ. “ಬಲಶಾಲಿಗಳು ಶಾಂತಿ ಸ್ಥಾಪಿಸಲು ಯತ್ನಿಸುತ್ತಾರೆ. ದುರ್ಬಲರು ಯುದ್ಧ ಮಾಡುತ್ತಾರೆ” ಎಂದಿರುವ ವಿಕ್ಚರ್ ಒರ್ಬಾನ್, ಟ್ರಂಪ್ ಧೈರ್ಯದಿಂದ ಶಾಂತಿಗಾಗಿ ನಿಂತಿದ್ದಾರೆ, ಅನೇಕರಿಗೆ ಇದು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.