ಬೆಂಗಳೂರು: ಕನ್ನಡದ ಯುವ ಬರಹಗಾರರಿಗೆ 15 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲು ಕನ್ನಡ ಪುಸ್ತಕ ಪ್ರಾಧಿಕಾರವು ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರದ (Kannada Pustaka Pradhikara) ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಕುರಿತು ಹೆಚ್ಚಿನ ಮಾಹಿತಿ ಇಂತಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಆಯ್ಕೆಯಾದ 50 ಯುವ ಬರಹಗಾರರ ಹಸ್ತಪ್ರತಿಗಳ ಪ್ರಕಟಣೆಗೆ 15 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತದೆ. ಇದಕ್ಕಾಗಿ ಕೆಲ ನಿಯಮಗಳನ್ನೂ ಪ್ರಾಧಿಕಾರ ರೂಪಿಸಿದೆ. ಲೇಖಕರು 18ರಿಂದ 40 ವರ್ಷದವರಾಗಿರಬೇಕು. ಸ್ವ ವಿವರ, ಮತ್ತು ದಾಖಲೆಗಳನ್ನು ಸಲ್ಲಿಸಬೇಕು. ಅವರ ಪುಸ್ತಕವು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.
ಲೇಖಕರು ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿ, ಸ್ನಾತಕೋತ್ತರ ಪದವಿಗೆ (ಪಿಎಚ್.ಡಿ) ಸಿದ್ಧಪಡಿಸಿದ ಸಂಶೋಧನಾ ಪ್ರಬಂಧಗಳನ್ನು ಕಳಿಸುವಂತಿಲ್ಲ. ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಸೇರಿ ವಿವಿಧ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರವು ತಿಳಿಸಿದೆ.
ಹಸ್ತಪ್ರತಿ ಸಲ್ಲಿಸಬೇಕಾದ ವಿಳಾಸ
ಅರ್ಜಿಗಳೊಂದಿಗೆ ಹಸ್ತಪ್ರತಿಯನ್ನು ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 560 002 ವಿಳಾಸಕ್ಕೆ ಕಳುಹಿಸಬೇಕು ಎಂದು ಎಂದು ತಿಳಿಸಲಾಗಿದೆ. ಹಸ್ತಪ್ರತಿಗಳು ಹಾಗೂ ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 24 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ www.kannadapustakapradhikara.com ಗೆ ಭೇಟಿ ನೀಡಬಹುದು. ಇಲ್ಲವೇ, ದೂರವಾಣಿ: 080-22484516, 22107704ಗೆ ಕೂಡ ಸಂಪರ್ಕಿಸಬಹುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರವು ಮಾಹಿತಿ ನೀಡಿದೆ.
ಇದನ್ನೂ ಓದಿ : ಎರಡು ಲಾರಿ ಮುಖಮುಖಿ ಡಿಕ್ಕಿ : ಸ್ಥಳದಲ್ಲೇ ಮೂವರು ಸಾವು



















