ವಾಷಿಂಗ್ಟನ್: ಕೋಟ್ಯಂತರ ಭಾರತೀಯರು, ಅಮೆರಿಕದ ಪ್ರಜೆಗಳು ಸೇರಿ ಜಗತ್ತಿನಾದ್ಯಂತ ಸುನೀತಾ ವಿಲಿಯಮ್ಸ್ (Sunita Williams) ಸೇರಿ ನಾಲ್ವರು ಗಗನಯಾತ್ರಿಗಳಿಗಾಗಿ ಮಾಡಿದ ಪ್ರಾರ್ಥನೆ ಫಲಿಸಿದೆ. ಸುಮಾರು 9 ತಿಂಗಳು ಬಾಹ್ಯಾಕಾಶದಲ್ಲೇ ಕಳೆದು, ಕೊನೆಗೂ ನಾಲ್ವರು ಗಗನಯಾತ್ರಿಗಳು ಭೂಮಿಗೆ ಆಗಮಿಸಿದ್ದಾರೆ. ಇದರ ಬೆನ್ನಲ್ಲೇ, ಸುನೀತಾ ವಿಲಿಯಮ್ಸ್ ಸೇರಿ ನಾಲ್ವರು ಗಗನಯಾತ್ರಿಗಳಿಗೆ ನಾಸಾ ಎಷ್ಟು ಸಂಬಳ ನೀಡಲಿದೆ ಎಂಬುದು ಭಾರಿ ಚರ್ಚೆಯಾಗುತ್ತಿದೆ.
ದಿನಕ್ಕೆ ಕೇವಲ 347 ರೂ. ಭತ್ಯೆ
ಗಗನಯಾತ್ರಿಗಳ ಸಂಬಳದ ಕುರಿತು ನಾಸಾದ ನಿವೃತ್ತ ಗಗನಯಾತ್ರಿ ಕ್ಯಾಡಿ ಕೋಲ್ ಮ್ಯಾನ್ ಅವರು ಮಾಹಿತಿ ನೀಡಿದ್ದಾರೆ. ಇವರು ಹೇಳುವ ಪ್ರಕಾರ, ಬಾಹ್ಯಾಕಾಶದಲ್ಲಿದ್ದರೂ ಗಗನಯಾತ್ರಿಗಳಿಗೆ ಹೆಚ್ಚಿನ ಸಂಬಳ, ಭತ್ಯೆ ನೀಡುವುದಿಲ್ಲ. “ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿದ್ದರೂ ಭೂಮಿಯ ಮೇಲೆ ಎಷ್ಟು ಸಂಬಳ ನೀಡುತ್ತದೆಯೋ, ಅಲ್ಲೂ ಅಷ್ಟೇ ಸಂಬಳ ನೀಡಲಾಗುತ್ತದೆ. ಅವರಿಗೆ ಹೆಚ್ಚಿನ ಭತ್ಯೆ ಇರುವುದಿಲ್ಲ” ಎಂದು ಹೇಳಿದ್ದಾರೆ.
“ಬಾಹ್ಯಾಕಾಶದಲ್ಲಿ ಕೆಲಸ ಮಾಡುವ ಗಗನಯಾತ್ರಿಗಳಿಗೆ ಪ್ರತಿದಿನ 4 ಡಾಲರ್ ಭತ್ಯೆ ನೀಡಲಾಗುತ್ತದೆ. ಅವರಿಗೆ ಸಂಬಳ ಹೊರತುಪಡಿಸಿ ಯಾವುದೇ ಹೆಚ್ಚುವರಿ ಭತ್ಯೆ ನೀಡಲಾಗುವುದಿಲ್ಲ” ಎಂದು ವಿವರಿಸಿದ್ದಾರೆ. ಅಂದರೆ, ಸುನೀತಾ ವಿಲಿಯಮ್ಸ್ ಅವರು 287 ದಿನ ಬಾಹ್ಯಾಕಾಶದಲ್ಲಿದ್ದಾರೆ. ಅವರಿಗೆ ದಿನಕ್ಕೆ 4 ಡಾಲರ್ ಭತ್ಯೆ ಎಂದರೆ, 347 ರೂ. ದಿನದ ಭತ್ಯೆ ಎಂದಾಯಿತು. ಅಲ್ಲಿಗೆ, 287 ದಿನಕ್ಕೆ ಅವರಿಗೆ ಕೇವಲ 99,589 ರೂ. ಭತ್ಯೆ ಸಿಗುತ್ತದೆ.
ಸಂಬಳ ಕೋಟಿ ರೂ.ಗಿಂತ ಹೆಚ್ಚು
ಸುನೀತಾ ವಿಲಿಯಮ್ಸ್ ಸೇರಿ ನಾಲ್ವರು ವಿಜ್ಞಾನಿಗಳಿಗೆ ತಲಾ 1 ಲಕ್ಷ ರೂ. ಭತ್ಯೆ ಸಿಕ್ಕರೂ, ಅವರ ವಾರ್ಷಿಕ ಸಂಬಳವೇ ಕೋಟಿ ರೂ.ಗಿಂತ ಜಾಸ್ತಿ ಇದೆ. ಸುನೀತಾ ವಿಲಿಯಮ್ಸ್ ಅವರು ಜಿಎಸ್-15 ಶ್ರೇಣಿಯ ಗಗನಯಾತ್ರಿಯಾಗಿದ್ದು, ಇವರಿಗೆ ವರ್ಷಕ್ಕೆ 1.08 ಕೋಟಿ ರೂಪಾಯಿಯಿಂದ 1.41 ಕೋಟಿ ರೂ.ವರೆಗೆ ಸಂಬಳ ಸಿಗುತ್ತದೆ.