ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚನೆಯ ಜಾಲ ದೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ. ಡಿಜಿಟಲ್ ಅರೆಸ್ಟ್ ಎಂಬುವುದು ಪೊಲೀಸರ ತನಿಖೆಯನ್ನೇ ಅರೆಸ್ಟ್ ಮಾಡುತ್ತಿದೆ. ಇಂದಿನ ದಿನಗಳಲ್ಲಿ ದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ಸೈಬರ್ ವಂಚನೆಯಿಂದ ರಾಜ್ಯದಲ್ಲಿ ಅಮಾಯಕರು 2,441 ಕೋಟಿ ಹಣ ಕಳೆದುಕೊಂಡಿದ್ದಾರೆ. ಪಾಪಿ, ಸೈಬರ್ ವಂಚಕರು ಲಂಗು ಲಗಾಮಿಲ್ಲದೆ ಜನರನ್ನು ಯಾಮಾರಿಸಿ ದುಡ್ಡು ಮಾಡುತ್ತಿದ್ದಾರೆ. ಕ್ಷಣ ಮಾತ್ರದಲ್ಲಿ ಜನ ದುಡಿದು..ದುಡಿದು..ಕೂಡಿಟ್ಟ ಹಣವನ್ನು ತಮ್ಮ ಖಾತೆಗೆ ಸೇರಿಸಿಕೊಳ್ಳುತ್ತಿದ್ದಾರೆ.
ಪೊಲೀಸರನ್ನೂ ಈ ಖದೀಮರು ಬಿಡುತ್ತಿಲ್ಲ. ಬುದ್ಧಿ ಜೀವಿಗಳೇ ಹೆಚ್ಚಾಗಿ ಅವರ ವಂಚನೆಯ ಜಾಲಕ್ಕೆ ಬೀಳುತ್ತಿರುವುದು ಕೂಡ ವಿಪರ್ಯಾಸವಾಗುತ್ತಿದೆ. ಸೈಬರ್ ಖದೀಮರು ನೀಡುವ ಖಾಸಗಿ ಮಾಹಿತಿಗಳಿಂದ ಭಯಬಿದ್ದು ಅಮಾಯಕರು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ವಂಚನೆಯ ಜಾಲ ವಿಸ್ತಾರವಾಗುತ್ತಲೇ ಇದೆ ಹೊರತು, ಕಡಿಮೆಯಾಗುತ್ತಿಲ್ಲ. ಆದರೆ, ಪ್ರಕರಣ ಭೇದಿಸುವ ಕಾರ್ಯ ಮಾತ್ರ ತೃಣಕ್ಕೆ ಸಮಾನ ಎನ್ನುವಂತಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೇವಲ 261.46 ಕೋಟಿ ಮೊತ್ತವನ್ನಷ್ಟೇ ಮರಳಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಎರಡು ವರ್ಷಗಳಲ್ಲಿ ದಾಖಲಾದ ಪ್ರಕರಣಗಳು ಎಷ್ಟು?
ಹಿಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 22,415 ಪ್ರಕರಣಗಳು ದಾಖಲಾಗಿದೆ. ಆದರೆ ಕೇವಲ 1841 ಸೈಬರ್ ಅಪರಾಧ ಪ್ರಕರಣಗಳನ್ನು ಬೇಧಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ಸಿಗುತ್ತಿಲ್ಲ ಎನ್ನುವುದು ದರಂತವೇ ಸರಿ.
ನಿಯಂತ್ರಣಕ್ಕೆ ಕ್ರಮ ಇಲ್ವಾ?
ಸೈಬರ್ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಮತ್ತು ತಡೆಯಲು ಪೊಲೀಸ್ ಇಲಾಖೆ ತನ್ನ ವ್ಯಾಪ್ತಿ ವಿಸ್ತರಿಸುತ್ತಲೇ ಸಾಗುತ್ತಿದೆ. ಆದರೆ, ಪರಿಹಾರ ಮಾತ್ರ ಶೂನ್ಯವಾಗುತ್ತಿದೆ.
ಡಿಜಿಟಲ್ ಅರೆಸ್ಟ್ ವಂಚನೆ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್ ಆಪ್ ಹಾಗೂ ಟ್ರೇಟರ್‌ಗಳ ಮೂಲಕ ಸೈಬರ್ ಜಾಗೃತಿಯ ಸಂದೇಶಗಳನ್ನು ರವಾನಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು ಜನರು ಮೋಸಕ್ಕೆ ಹೋಗುವುದು ಮಾತ್ರ ತಪ್ಪುತ್ತಿಲ್ಲ. ಸೈಬರ್ ವಂಚನೆಗೆ ಪೊಲೀಸ್ ಇಲಾಖೆ ಇನ್ನಾದರೂ ಬ್ರೇಕ್ ಹಾಕಿ, ಜನರ ನೆಮ್ಮದಿಗೆ ಕಾರಣವಾಗಬೇಕು ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ಆಶಯ.