ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆ.1ರಂದು) ಮಂಡಿಸಿದ ಬಜೆಟ್‌ನಲ್ಲಿ ಕ್ರೀಡೆಗೆ 351.98 ಕೋಟಿ ರೂ. ಮೀಸಲಿಟ್ಟಿದ್ದು ಈ ಮೂಲಕ ಗಾತ್ರವನ್ನು ಗಣನೀಯವಾಗಿ ಹೆಚ್ಚಿಸಿರುವುದಾಗಿ ಘೋಷಿಸಿದ್ದಾರೆ. ಕೆಳ ಸ್ತರದಲ್ಲಿ ಕ್ರೀಡಾಪಟುಗಳನ್ನು ಗುರುತಿಸುವ, ಪ್ರೋತ್ಸಾಹಿಸುವ ಖೇಲೋ ಇಂಡಿಯಾ ಸಿಂಹಪಾಲು ಪಡೆದಿರುವುದು ವಿಶೇಷ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ 200 ಕೋಟಿ ರೂ ಹೆಚ್ಚಿಸಲಾಗಿದೆ.
ಖೇಲೋ ಇಂಡಿಯಾ 2024-25ರ ಸಾಲಿನಲ್ಲಿ 800 ಕೋಟಿ ರೂಪಾಯಿ ಅನುದಾನ ಪಡೆದಿತ್ತು. ಆದರೆ, 2025-26ರ ಹಣಕಾಸು ವರ್ಷಕ್ಕೆ 1,000 ಕೋಟಿ ರೂ ಘೋಷಿಸಿದೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ 3,794.30 ಕೋಟಿ ರೂಪಾಯಿಯನ್ನು ಘೋಷಿಸಲಾಗಿದೆ.
ಸಾಯ್ಗೆ 830 ಕೋಟಿ ಅನುದಾನ
ರಾಷ್ಟ್ರೀಯ ಕ್ರೀಡಾ ಫೆಡರೇಶನ್ಗಳಿಗೆ ನೆರವು ನೀಡಲು ನಿಗದಿಪಡಿಸಿದ ಮೊತ್ತವನ್ನು 340 ಕೋಟಿ ರೂಪಾಯಿಗಳಿಂದ 400 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಭಾರತ ಪ್ರಸ್ತುತ 2036ರ ಒಲಿಂಪಿಕ್ ಕ್ರೀಡಾಕೂಟ ಆತಿಥ್ಯ ವಹಿಸುವ ಮಹತ್ವಾಕಾಂಕ್ಷೆಯ ಬಿಡ್ ಸಲ್ಲಿಸಲು ಯತ್ನಿಸುತ್ತಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಪತ್ರವನ್ನೂ ಸಲ್ಲಿಕೆ ಮಾಡಲಾಗಿದೆ. ರಾಷ್ಟ್ರೀಯ ಶಿಬಿರಗಳ ಆಯೋಜನೆ ಮತ್ತು ಕ್ರೀಡಾಪಟುಗಳ ತರಬೇತಿಗೆ ವ್ಯವಸ್ಥಾಪನಾ ವ್ಯವಸ್ಥೆಗಳ ನೋಡಲ್ ಸಂಸ್ಥೆಯಾದ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) 815 ಕೋಟಿ ರೂ.ಗಳಿಂದ 830 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ದೇಶಾದ್ಯಂತ ಕ್ರೀಡಾಂಗಣಗಳನ್ನು ನಿರ್ವಹಿಸುವ ಮತ್ತು ಬಳಸಿಕೊಳ್ಳುವ ಜವಾಬ್ದಾರಿ ಸಾಯ್ ಮೇಲಿದೆ. ರಾಷ್ಟ್ರೀಯ ಉದ್ದೀಪನಾ ಮದ್ದು ಪರೀಕ್ಷಾ ಪ್ರಯೋಗಾಲಯಕ್ಕೂ ಇದೇ ರೀತಿಯ ಹೆಚ್ಚಳವನ್ನು ಘೋಷಿಸಲಾಗಿದೆ. 2024-25ರಲ್ಲಿ 18.70 ಕೋಟಿ ಅನುದಾನ ಪಡೆದಿದ್ದ ಪರೀಕ್ಷಾ ಪ್ರಯೋಗಾಲಯ 2025-26ರ ಹಣಕಾಸು ವರ್ಷದಲ್ಲಿ 23 ಕೋಟಿ ರೂ ಪಡೆಯಲಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯ ಬಜೆಟ್ ಅನ್ನು 20.30 ಕೋಟಿ ರೂ.ಗಳಿಂದ 24.30 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಪ್ರೋತ್ಸಾಹಧನ ಕಡಿತ
1998 ರಲ್ಲಿ ರಚಿಸಲಾದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಗೆ ಕೊಡುಗೆ ಸತತ 2ನೇ ವರ್ಷ 18 ಕೋಟಿ ರೂಪಾಯಿ ನೀಡಿದೆ. ಆದರೆ ಕ್ರೀಡಾಪಟುಗಳಿಗೆ ನೀಡಲಾಗುವ ಪ್ರೋತ್ಸಾಹಧನದ ಅನುದಾನವನ್ನು ಈ ವರ್ಷ 42.65 ಕೋಟಿ ರೂಪಾಯಿಗಳಿಂದ 37 ಕೋಟಿ ರೂಪಾಯಿಗೆ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.
ಬಹುಪಕ್ಷೀಯ ಸಂಸ್ಥೆಗಳು ಮತ್ತು ಯುವ ವಿನಿಮಯ ಕಾರ್ಯಕ್ರಮಗಳಿಗೆ 11.70 ಕೋಟಿ ರೂ.ಗಳಿಂದ 55 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಸೌಲಭ್ಯಗಳನ್ನು ಹೆಚ್ಚಿಸಲು 20 ಕೋಟಿ ರೂಪಾಯಿಗಳ ನಿಧಿಯನ್ನು ಅನುಮೋದಿಸಲಾಗಿದೆ.
ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) “ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯುವಕರ ಚಾರಿತ್ರ್ಯ ಮತ್ತು ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇದು ಸಾಮಾಜಿಕ ಕಾರ್ಯ ಮತ್ತು ಸಮುದಾಯ ಸೇವೆಯ ಮೂಲಕ ಯುವಕರನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯೋಜನೆಯಾಗಿದೆ.