ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ (Ahmed al-Sharaa) ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿ, ಮಾತುಕತೆ ನಡೆಸಿದ್ದಾರೆ. ಒಂದು ಕಾಲದಲ್ಲಿ ಊಹಿಸಲು ಅಸಾಧ್ಯವಾಗಿದ್ದ ಈ ಐತಿಹಾಸಿಕ ಭೇಟಿ, ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಅದಕ್ಕಿಂತಲೂ ವಿಶೇಷವೆಂದರೆ, ಈ ಭೇಟಿಯ ವೇಳೆ, ಟ್ರಂಪ್ ಅವರು ಅಲ್-ಶರಾಗೆ 2 ಸುಗಂಧ ದ್ರವ್ಯವನ್ನು (ಪರ್ಫ್ಯೂಮ್) ಉಡುಗೊರೆಯಾಗಿ ನೀಡಿದ್ದು, “ಇದು ಅತ್ಯುತ್ತಮ ಸುಗಂಧ, ಒಂದು ನಿಮಗಾಗಿ, ಮತ್ತೊಂದು ನಿಮ್ಮ ಪತ್ನಿಗಾಗಿ” ಎಂದು ಹೇಳಿದ್ದಲ್ಲದೆ, ತಮಾಷೆಯಾಗಿ “ನಿಮಗೆ ಎಷ್ಟು ಪತ್ನಿಯರಿದ್ದಾರೆ?” (How many wives?) ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗೊಂದಲಕ್ಕೊಳಗಾದ ಅಲ್-ಶರಾ “ಒಬ್ಬರು” ಎಂದು ಉತ್ತರಿಸಿದಾಗ ನಗುವಿನ ಅಲೆ ಎದ್ದಿತು. ಆಗ ಟ್ರಂಪ್, “ಹೇಳಕ್ಕಾಗಲ್ಲ ಅಲ್ವಾ ಅದಕ್ಕೆ ಕೇಳಿದೆ!” (You never know!) ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐತಿಹಾಸಿಕ ಭೇಟಿಯ ಮಹತ್ವ
ಒಂದು ಕಾಲದಲ್ಲಿ ಅಮೆರಿಕದಿಂದಲೇ ‘ಭಯೋತ್ಪಾದಕ’ ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿದ್ದ, ಅಲ್-ಖೈದಾ ಮಾಜಿ ಕಮಾಂಡರ್ ಆಗಿದ್ದ ಅಲ್-ಶರಾ ಅವರ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿತ್ತು. ಅಂತಹ ವ್ಯಕ್ತಿಯನ್ನು ಟ್ರಂಪ್ ಶ್ವೇತಭವನಕ್ಕೆ ಸ್ವಾಗತಿಸಿರುವುದು ರಾಜತಾಂತ್ರಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. 1946ರಲ್ಲಿ ಸಿರಿಯಾ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ವೇತಭವನಕ್ಕೆ ಅಧಿಕೃತವಾಗಿ ಭೇಟಿ ನೀಡಿದ ಮೊದಲ ಸಿರಿಯಾ ನಾಯಕ ಇವರಾಗಿದ್ದಾರೆ.
ನಿರ್ಬಂಧ ತೆರವು ಮುಖ್ಯ ಅಜೆಂಡಾ
ಸಿರಿಯಾ ಮೇಲಿನ ನಿರ್ಬಂಧಗಳನ್ನು ಅಮೆರಿಕ ತಾತ್ಕಾಲಿಕವಾಗಿ 180 ದಿನಗಳ ಕಾಲ ಹಿಂಪಡೆದಿರುವ ಬೆನ್ನಲ್ಲೇ ಈ ಭೇಟಿ ನಡೆದಿದೆ. ಬಶರ್ ಅಲ್-ಅಸಾದ್ ಸರ್ಕಾರದ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಶಾಶ್ವತವಾಗಿ ರದ್ದುಪಡಿಸಬೇಕೆಂಬುದು ಅಲ್-ಶರಾ ಅವರ ಪ್ರಮುಖ ಬೇಡಿಕೆಯಾಗಿದೆ. ಅಲ್-ಶರಾ ಅವರ ಕಠಿಣ ಭೂತಕಾಲವನ್ನು ಉಲ್ಲೇಖಿಸಿದ ಟ್ರಂಪ್, “ನಮ್ಮೆಲ್ಲರ ಭೂತಕಾಲ ಕಠಿಣವಾಗಿತ್ತು. ಆದರೆ ಇವರಿಗೆ ನಿಜಕ್ಕೂ ಕಳೆದುಹೋದ ಸಮಯ ಅತ್ಯಂತ ಕಠಿಣವಾಗಿತ್ತು. ಆ ಗಟ್ಟಿ ಹಿನ್ನೆಲೆ ಇಲ್ಲದಿದ್ದರೆ, ಅವರಿಗೆ ಈ ಅವಕಾಶ ಸಿಗುತ್ತಿರಲಿಲ್ಲ” ಎಂದು ಹೇಳಿದರು.
ಕಳೆದ ವರ್ಷ ಬಶರ್ ಅಲ್-ಅಸಾದ್ ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೇರಿದ್ದ 43 ವರ್ಷದ ಅಲ್-ಶರಾ, ಟ್ರಂಪ್‌ಗೆ ‘ಇತಿಹಾಸದ ಮೊದಲ ವರ್ಣಮಾಲೆ’, ‘ಮೊದಲ ಅಂಚೆ ಚೀಟಿ’ ಸೇರಿದಂತೆ ಪ್ರಾಚೀನ ಸಿರಿಯಾದ ಕಲಾಕೃತಿಗಳ ಪ್ರತಿಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: “ಅಮೆರಿಕಕ್ಕೆ ಬನ್ನಿ, ತರಬೇತಿ ನೀಡಿ, ವಾಪಸ್ ಹೋಗಿ” : ಎಚ್-1ಬಿ ವೀಸಾಗೆ ಟ್ರಂಪ್ ಆಡಳಿತದ ಹೊಸ ಸೂತ್ರ!


















