ಕೊಲೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆಯುತ್ತಿದ್ದದ್ದು, ಸಾಬೀತಾಗುತ್ತಿದ್ದಂತೆ ಕೋರ್ಟ್ ಸೂಚನೆ ಮೇರೆಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದಿನ ಕಳೆಯುತ್ತಿದ್ದಾರೆ.
ಇಂದು ಬೆಳಿಗ್ಗೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ರಾತ್ರಿ ಊಟ ಸೇವಿಸಿದ್ದಾರೆ. ರಾತ್ರಿ ಊಟದಲ್ಲಿ 2 ಚಪಾತಿ-ಪಲ್ಯ, ಅನ್ನ ಸಾಂಬರ್, ಮಜ್ಜಿಗೆ ನೀಡಲಾಗಿದೆ. ಜೈಲಿನ ನಿಯಮದಂತೆ 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆಯನ್ನು ಜೈಲಿನ ಸಿಬ್ಬಂದಿ ನೀಡಿದ್ದಾರೆ. ದರ್ಶನ್ ಗೆ ಇನ್ನು ಮುಂದೆ ಇದೆ ಮೆನು ಇರಲಿದೆ.
ಬಳ್ಳಾರಿ ಜೈಲಿಗೆ ಬರುತ್ತಿದ್ದಂತೆ ದರ್ಶನ್ ಮಧ್ಯಾಹ್ನದ ಊಟ ಬೇಡ ಅಂದಿದ್ದರು. ಆದರೆ ರಾತ್ರಿ ಊಟ ಸೇವಿಸಿದ್ದಾರೆ. ಜೈಲಿನ ನಿಗದಿತ ಸಮಯದಂತೆ ಸಂಜೆ 7ಕ್ಕೆ ಊಟ ನೀಡಲಾಗಿದೆ. ದರ್ಶನ್ ಸಾಮಾನ್ಯ ಕೈದಿಗಳಂತೆ ಡ ಜೈಲೂಟ ಸೇವಿಸಿ ಸೆಲ್ ಗೆ ತೆರಳಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ರೌಡಿಗಳೊಂದಿಗೆ ಸೇರಿ ಹಾಯಾಗಿ ಜೀವನ ಸಾಗಿಸಿದ್ದರು. ಆದರೆ, ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್ ಬಳ್ಳಾರಿ ಜೈಲಿಗೆ ಬರುವಂತಾಯಿತು. ಇನ್ನುಳಿದ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ದರ್ಶನ್ ವಿಚಾರವಾಗಿ ಮಾತನಾಡಿರುವ ಎಸ್ಪಿ ಶೋಭಾರಾಣಿ, ದರ್ಶನ್ ಅನಾರೋಗ್ಯದ ಬಗ್ಗೆ ಹಬ್ಬಿರುವುದು ಕೇವಲ ವದಂತಿ. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ದರ್ಶನ್ ಧರಿಸಿದ್ದ ಕಡಗ, ದಾರ ಬಿಚ್ಚಿಸಲಾಗಿದೆ. ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಅವರು ಜೈಲಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಜೈಲಿನ ನಿಯಮದಂತೆ ಕುಟುಂಬಸ್ಥರಿಗೆ ಅವಕಾಶ ಇರುತ್ತದೆ ಎಂದು ಹೇಳಿದ್ದಾರೆ.