ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಒಂದು ಹಕ್ಕಷ್ಟೇ ಅಲ್ಲ ಅದು ಜವಾಬ್ದಾರಿಯು ಹೌದು. ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದೇ ಮತದಾನದ ಮೇಲೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವರಾಷ್ಟ್ರ ಎಂಬ ಹೆಗ್ಗಳಿಕೆಯ ಭಾರತದಲ್ಲಿ ಜನಸಾಮಾನ್ಯ ಮತ್ತು ಜನಪ್ರತಿನಿಧಿಗಳ ನಡುವಿನ ಸಂಬಂಧಕ್ಕೆ ಚುನಾವಣೆಯದೇ ಅಂತಿಮ ಮತ್ತು ನಿರ್ಣಾಯಕ ಪಾತ್ರ. ಜನಪ್ರತಿನಿಧಿಗಳಾದಿಯಾಗಿ ದೇಶದ ಅತ್ಯನ್ನತ ಹುದ್ದೆಗಳಾದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಆಯ್ಕೆಯು ಚುನಾವಣೆಯ ಮೂಲಕವೇ ನೆಡೆಯುವುದು ವಿಶೇಷ.
ವಿಭಿನ್ನ ಮತ್ತು ವಿಶಿಷ್ಟ ಆಯ್ಕೆ
ಭಾರತ ಸರ್ಕಾರದ ಕಾರ್ಯಾಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿ ಅಂದರೆ ಅದು ಉಪರಾಷ್ಟ್ರಪತಿಗಳದ್ದು. ಉಪರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರು ಕೂಡ ಹೌದು. ಸಂವಿಧಾನದ 324ನೇ ಕಲಂ ಅಡಿ ಭಾರತೀಯ ಚುನಾವಣಾ ಆಯೋಗದಿಂದ ಉಪರಾಷ್ಟ್ರಪತಿಗಳ ಆಯ್ಕೆಗೆ ಚುನಾವಣಾ ನಡೆಯುತ್ತದೆ. ಇದೊಂದು ವಿಭಿನ್ನ ಮತ್ತು ವಿಶಿಷ್ಟ ಆಯ್ಕೆ ಪ್ರಕ್ರಿಯೆ.
ಉಪರಾಷ್ಟ್ರಪತಿ ಹುದ್ದೆಗೆ ಅರ್ಹತೆಗಳು
*ಭಾರತದ ನಾಗರಿಕರಾಗಿರಬೇಕು
*ಕನಿಷ್ಠ 35 ವರ್ಷ ವಯಸ್ಸಾಗಿರಬೇಕು
*ರಾಜ್ಯಸಭೆಗೆ ಆಯ್ಕೆಯಾಗುವ ಅರ್ಹತೆ ಹೊಂದಿರಬೇಕು
*ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಡಿ ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು
*ಸಂವಿಧಾನದ 66 ಮತ್ತು 67ನೇ ವಿಧಿಯಡಿ ವಿಧಿಸಿರುವ ಷರತ್ತು ಪೂರೈಸಬೇಕು
ಮತದಾರರು ಯಾರ್ಯಾರು
ಜನಸಾಮಾನ್ಯರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಎಲೆಕ್ಟೋರಲ್ ಕಾಲೇಜ್ ಮೂಲಕ ಉಪರಾಷ್ಟ್ರಪತಿ ಆಯ್ಕೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಹಾಗೂ ನಾಮನಿರ್ದೇಶಿತ ಸಂಸದರಷ್ಟೇ ಮತದಾನ ಮಾಡಲು ಅರ್ಹರಾಗಿರುತ್ತಾರೆ.
ಎಲೆಕ್ಟೋರಲ್ ಕಾಲೇಜ್
ಒಟ್ಟಾರೆ ಲೋಕಸಭೆಯ 543 ಸಂಸದರು, ರಾಜ್ಯಸಭೆಯ 245 ಸದಸ್ಯರು ಸೇರಿ 788 ಸಂಸದರು ಭಾರತದ ಉಪರಾಷ್ಟ್ರಪತಿಗಳನ್ನು ಚುನಾಯಿಸುತ್ತಾರೆ. ಇವರನ್ನೆಲ್ಲಾ ಎಲೆಕ್ಟೋರಲ್ ಕಾಲೇಜ್ ಎಂದು ಕರೆಯಲಾಗುತ್ತದೆ. ಆದರೆ ಪ್ರಸ್ತುರ ಲೋಕಸಭೆಯಲ್ಲಿ 1 ಮತ್ತು ರಾಜ್ಯಸಭೆಯಲ್ಲಿ 6 ಸೀಟುಗಳು ಖಾಲಿ ಇರುವ ಕಾರಣ, ಈ ಬಾರಿ 781 ಸಂಸದರಷ್ಟೇ ಮತ ಚಲಾಯಿಸಿದ್ದಾರೆ.
ಇದೊಂದು ತ್ವರಿತ ಚುನಾವಣೆ!
ಆಡಳಿತರೂಢ ಪಕ್ಷ ಮತ್ತು ವಿರೋಧ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಸರಳ ಬಹುಮತ ಪಡೆದವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಾರೆ. ಅಂದರೆ, ಗೆಲ್ಲವು ಕನಿಷ್ಠ 391 (ಒಟ್ಟು 781 ಮತಗಳ ಅರ್ಧವಾದ 390+1) ಮತಗಳ ಅಗತ್ಯವಿರುತ್ತದೆ. ಚುನಾವಣೆ ದಿನವೇ ಮತಗಳ ಎಣಿಕೆಯೂ ನಡೆಯುತ್ತದೆ. ವಿಜೇತರ ಘೋಷಣೆ ಆಗುತ್ತದೆ. ಹಾಗಾಗಿ ಇತರೆ ಚುನಾವಣೆಗಳಿಗಿಂತ ಇದೊಂದು ತ್ವರಿತ ಚುನಾವಣೆಯು ಹೌದು.
ಆಯ್ಕೆಯಾದ ಉಪರಾಷ್ಟಪತಿಗಳ ಅಧಿಕಾರಾವಧಿ ೫ ವರ್ಷಗಳದ್ದಾಗಿರುತ್ತದೆ.
ಉಪರಾಷ್ಟಪತಿಗಳದ್ದು ವೇತನ ರಹಿತ ಹುದ್ದೆ!!
ಇತರೆ ಸಾಂವಿಧಾನಿಕ ಹುದ್ದೆಗಳಂತೆ ಉಪರಾಷ್ಟ್ರಪತಿಯಾಗಿ ಆಯ್ಕೆಯಾದವರಿಗೆ ಯಾವುದೇ ವೇತನ ಇರುವುದಿಲ್ಲ ಆದರೆ ಭತ್ಯೆ ನೀಡಲಾಗುತ್ತದೆ ಎಂಬುದು ನಿಜ. ಹಾಗಾಗಿ ಇದೊಂದು ವೇತನ ರಹಿತ ಹುದ್ದೆ.



















