ನವದೆಹಲಿ: ಈಗಾಗಲೇ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್-ಬಿಜೆಪಿ- ಆಪ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ.
ಬರೋಬ್ಬರಿ 12 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದಕ್ಕಾಗಿ ಕಾಂಗ್ರೆಸ್ ಪಣ ತೊಟ್ಟಂತೆ ಕೆಲಸ ಮಾಡುತ್ತಿದೆ. ಹೀಗಾಗಿಯೇ ಕರ್ನಾಟಕ ಮಾದರಿಯ ಗ್ಯಾರಂಟಿ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಘೋಷಣೆಯಾಗಿರುವಂತೆ ‘ಗೃಹಲಕ್ಷ್ಮಿ’ ಮಾದರಿಯ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ದೆಹಲಿಯಲ್ಲೂ ಘೋಷಿಸಿದೆ. ಮಹಿಳಾ ಮತದಾರರನ್ನು ಸೆಳೆಯಲು ಪ್ರತಿ ತಿಂಗಳು 2,500 ರೂ. ಹಣಕಾಸು ನೆರವು ನೀಡುವ ‘ಪ್ರೀತಿಯ ಸಹೋದರಿ’ (ಪ್ಯಾರಿ ದೀದಿ) ಗ್ಯಾರಂಟಿ ಯೋಜನೆ ಘೋಷಿಸಲಾಗಿದೆ. ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ‘ಪ್ರೀತಿಯ ಸಹೋದರಿ’ ಹೆಸರಿನ ಯೋಜನೆ ಘೋಷಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಮಹಿಳೆಯರಿಗೆ ಪ್ರತಿ ತಿಂಗಳು 2,100 ರೂ. ಆರ್ಥಿಕ ನೆರವು ನೀಡುವ ‘ಮಹಿಳಾ ಸಮ್ಮಾನ್’ ಯೋಜನೆ ಘೋಷಿಸಿದ್ದು, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ‘ಪ್ರೀತಿಯ ಸಹೋದರಿ’ ಘೋಷಿಸಿದೆ. ಈ ಮಧ್ಯೆ ಬಿಜೆಪಿ-ಆಪ್ ಮಧ್ಯೆ ಸಿಎಂ ಬಂಗಲೆ ‘ಶೀಶ್ಮಹಲ್’ ಸಂಗ್ರಾಮ ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಸೋರಿಕೆಯಾದ ಸಿಎಜಿ ವರದಿಯ ಅಂಶ ಪ್ರಸ್ತಾಪಿಸಿ ಆಪ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಶೀಶ್ಮಹಲ್ ಬಂಗಲೆ ನಿರ್ಮಾಣಕ್ಕೆ ನಿದಿಗತ ವೆಚ್ಚಕ್ಕಿಂತ ಶೇ.342ರಷ್ಟು ಹೆಚ್ಚುವರಿ ಹಣ ವಿನಿಯೋಗಿಸಲಾಗಿದೆ ಎಂಬ ಮಹಾಲೆಕ್ಕ ಪರಿಶೋಧಕರ ವರದಿ ಆಪ್ ಹಾಗೂ ಬಿಜೆಪಿ ಮಧ್ಯೆ ದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. 7.6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಬಂಗಲೆಗೆ ಯಾವುದೇ ಆಡಳಿತಾತ್ಮಕ ಒಪ್ಪಿಗೆ ಇಲ್ಲದೇ 33.66 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡುತ್ತಿದೆ. ಈಗ ಚುನಾವಣೆ ಕೂಡ ಘೋಷಣೆಯಾಗಿರುವುದರಿಂದ ಅಧಿಕಾರದ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇದನ್ನೇ ಮುಖ್ಯ ಅಸ್ತ್ರವಾಗಿಟ್ಟುಕೊಂಡಿದೆ. ಇದರೊಂದಿಗೆ ಆಪ್ ಅವಧಿಯಲ್ಲಾದ ಹಗರಣಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಲು ಆರಂಭಿಸಿದೆ.