ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಂಡ್ ಗ್ಯಾಂಗ್ ಜೈಲಿನಲ್ಲಿದೆ. ಆರೋಪಿಗಳು ಜೈಲು ಸೇರಿ ಮೂರು ತಿಂಗಳು ಕಳೆಯುತ್ತಿವೆ. ಪೊಲೀಸರು ಇನ್ನೇನು ಕೆಲವೇ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು, ದರ್ಶನ್ ಗೆ ಯಾವಾಗ ಜಾಮೀನು ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ.
ಚಾರ್ಜ್ ಶೀಟ್ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇರುವ ಈ ಸಮಯದಲ್ಲಿ ಕೆಲವು ಕುತೂಹಲಕಾರಿ ವಿಷಯಗಳು ಹೊರ ಬೀಳುತ್ತಲೇ ಇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 52 ಸ್ಥಳಗಳಲ್ಲಿ ಮಹಜರು ನಡೆಸಿದ್ದಾರೆ. ಮೈಸೂರು, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಹಲವೆಡೆ ಸ್ಥಳ ಮಹಜರು ನಡೆದಿವೆ. ಅಲ್ಲದೇ, ಪೊಲೀಸರು 150ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಸ್ಥಳ ಮಹಜರು ದಾಖಲೆ, ಸಾಕ್ಷಿಗಳೊಟ್ಟಿಗೆ ಸಮೀಕರಿಸಿದ್ದಾರೆ. ಹಾಗೂ ಪ್ರಕರಣದ ಟೈಮ್ ಲೈನ್ ಮ್ಯಾಚ್ ಮಾಡಲು ಸಹ ಬಳಸಿಕೊಂಡಿದ್ದಾರೆ.
ಜೂನ್ 11 ರಂದು ಬೆಳ್ಳಂಬೆಳಿಗ್ಗೆ ನಟ ದರ್ಶನ್ ಬಂಧನವಾಗಿತ್ತು. ಮೈಸೂರಿನಲ್ಲಿ ದರ್ಶನ್ ರನ್ನು ಪೊಲೀಸರು ಬಂಧಿಸಲು ಹೋದಾಗ ಪೊಲೀಸರ ಮುಂದೆ ನನ್ನ ಜೊತೆಗಿದ್ದ ಹುಡುಗರಿಂದ ನಾನು ಹಾಳಾದೆ ಎಂದು ಹೇಳಿದ್ದರಂತೆ. ಆನಂತರ ಪವಿತ್ರಾಗೌಡ ಪೊಲೀಸರ ಕೈಗೆ ಸಿಗದಾದಾಗ ದರ್ಶನ್ ಮೊಬೈಲ್ ನಿಂದಲೇ ಪವಿತ್ರಾಗೆ ಕರೆ ಮಾಡಿಸಿದ ಪೊಲೀಸರು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆಯಿಸಿಕೊಂಡು ಬಂಧಿಸಿದ್ದಾರೆ.
ಈಗ ಸಮಾರು 3 ತಿಂಗಳಷ್ಟು ದಿನ ಜೈಲಿನಲ್ಲಿರುವ ದರ್ಶನ್ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಪ್ರತಿ ದಿನ ನಟ ದರ್ಶನ್, ಇತರೆ ಕೈದಿಗಳೊಟ್ಟಿಗೆ ವಾಲಿಬಾಲ್ ಆಟ ಆಡುತ್ತ ಸಮಯ ಕಳೆಯುತ್ತಿದ್ದಾರೆ. ಇನ್ನಿತರ ಕೈದಿಗಳೊಂದಿಗೆ ಮಾತನಾಡುತ್ತ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.