ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಅರೆಸ್ಟ್ ಆಗಿರುವ ನಟ ದರ್ಶನ್ ಗೆ ಜುಲೈ 4ರ ವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ದರ್ಶನ್ (Darshan) ಪರಪ್ಪನ ಅಗ್ರಹಾರ ಸದಸ್ಯರಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿತರ ನಾಲ್ವರು ಆರೋಪಿಗಳನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದಾರೆ. ಜೈಲಿನಲ್ಲಿ 6109 ಕೈದಿ ಸಂಖ್ಯೆ ಪಡೆದಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ (Parappana Agrahara Jail) ಮೊದಲ ದಿನ ಕಳೆದಿದ್ದಾರೆ. ರಾತ್ರಿ ದರ್ಶನ್‌ಗೆ ಮುದ್ದೆ, ಚಪಾತಿ, ಸಾಂಬಾರ್ ಮತ್ತು ಮಜ್ಜಿಗೆ ನೀಡಲಾಗಿತ್ತು. ಸರಿಯಾಗಿ ಊಟ ಮಾಡದ ದರ್ಶನ್ ತಡವಾಗಿಯೇ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ.
ಪೊಲೀಸ್ ವಿಚಾರಣೆಯಿಂದ ಹೈರಾಣಾಗಿದ್ದ ನಟ, ಮೊದಲ ದಿನ ಜೈಲೂಟ ಸರಿಯಾಗಿ ಮಾಡಲಾಗದೇ ತಡರಾತ್ರಿ ವರೆಗೂ ಮಂಕಾಗಿಯೇ ಕುಳಿತಿದ್ದು, ರಾತ್ರಿ 11:30ರ ವೇಳೆಗೆ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 6:30ರ ವೇಳೆಗೆ ಎಚ್ಚರಗೊಂಡಿದ್ದ ದರ್ಶನ್, ನಿತ್ಯಕರ್ಮ ಮುಗಿಸಿ, ಸೆಲ್ ನಲ್ಲಿ ಕುಳಿತಿದ್ದಾರೆ. ದರ್ಶನ್ ಇರುವ ಅದೇ ಸೆಲ್ ನಲ್ಲಿ ಸಹಖೈದಿ ವಿನಯ್ ಕೂಡ ಇದ್ದಾರೆ. ಜೈಲಿನ ಭಾನುವಾರದ ಮೆನುವಿನಂತೆ ದರ್ಶನ್‌ಗೆ ಪಲಾವ್ ನೀಡಲಾಗುವುದು ಎನ್ನಲಾಗಿದೆ.
ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಕೂಡಿ ಹಾಕಿ, ಚಿತ್ರಹಿಂಸೆ ಕೊಟ್ಟು ಕೊಂದ ಕೇಸಲ್ಲಿ ದರ್ಶನ್‌ಗೆ 13 ದಿನ ನ್ಯಾಯಾಂಗ ಬಂಧನ ವಿಧಿಸಲಾಯಿತು. 24ನೇ ಎಸಿಎಂಎಂ ಕೋರ್ಟ್ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ.