ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 20 ಪ್ರಯಾಣಿಕರು ಸಜೀವ ದಹನಗೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದುರಂತಕ್ಕೀಡಾದ ಬಸ್‌ನಲ್ಲಿ 234 ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿದ್ದವು ಎಂದೂ, ಬೆಂಕಿ ಹೊತ್ತಿಕೊಂಡಾಗ ಅವುಗಳ ಬ್ಯಾಟರಿಗಳು ಸ್ಫೋಟಗೊಂಡ ಪರಿಣಾಮ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಯಿತು ಎಂದು ವಿಧಿವಿಜ್ಞಾನ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಎಂಬವರು ಸುಮಾರು 46 ಲಕ್ಷ ರೂ. ಮೌಲ್ಯದ ಈ ಸ್ಮಾರ್ಟ್‌ಫೋನ್‌ಗಳನ್ನು ಬೆಂಗಳೂರಿನಲ್ಲಿರುವ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ಗೆ ಪಾರ್ಸೆಲ್ ಮೂಲಕ ಕಳುಹಿಸುತ್ತಿದ್ದರು. ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಈ ಫೋನ್‌ಗಳ ಬ್ಯಾಟರಿಗಳು ಸ್ಫೋಟಗೊಳ್ಳುವ ಶಬ್ದ ಕೇಳಿಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ಪಿ. ವೆಂಕಟರಾಮನ್ ಅವರ ಪ್ರಕಾರ, ಬಸ್‌ನ ಮುಂಭಾಗದಲ್ಲಿ ಇಂಧನ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಡಿ ಸಿಲುಕಿದ್ದ ಬೈಕ್‌ನಿಂದ ಪೆಟ್ರೋಲ್ ಸೋರಿಕೆಯಾಗಿ, ಇಂಜಿನ್‌ನ ಶಾಖ ಅಥವಾ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದರ ಜೊತೆಗೆ, ಬಸ್‌ನ ಹವಾನಿಯಂತ್ರಣ ವ್ಯವಸ್ಥೆಯ ಬ್ಯಾಟರಿಗಳು ಕೂಡ ಸ್ಫೋಟಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಬಸ್‌ನ ನೆಲಹಾಸಿನ ಅಲ್ಯೂಮಿನಿಯಂ ಶೀಟ್‌ಗಳು ಸಂಪೂರ್ಣವಾಗಿ ಕರಗಿಹೋಗಿದ್ದವು. “ಕರಗಿದ ಶೀಟ್‌ಗಳ ಮೂಲಕ ಮೂಳೆಗಳು ಮತ್ತು ಬೂದಿ ಕೆಳಗೆ ಬೀಳುತ್ತಿರುವುದನ್ನು ನಾವು ನೋಡಿದ್ದೇವೆ,” ಎಂದು ವೆಂಕಟರಾಮನ್ ದುರಂತದ ಭೀಕರತೆಯನ್ನು ವಿವರಿಸಿದ್ದಾರೆ.
ಬಸ್‌ನ ತೂಕ ಕಡಿಮೆ ಮಾಡಿ ವೇಗ ಹೆಚ್ಚಿಸಲು ಕಬ್ಬಿಣದ ಬದಲು ಹಗುರವಾದ ಅಲ್ಯೂಮಿನಿಯಂ ಬಳಸಿರುವುದು ಕೂಡ ದುರಂತದ ತೀವ್ರತೆ ಹೆಚ್ಚಲು ಕಾರಣವಾಗಿದೆ. ಈ ರಚನಾತ್ಮಕ ದೋಷವು ತುರ್ತು ಪರಿಸ್ಥಿತಿಯಲ್ಲಿ ಮಾರಣಾಂತಿಕವಾಗಿ ಪರಿಣಮಿಸಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



















