ಬೆಂಗಳೂರು | ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ದಾರುಣ ಘಟನೆಯೊಂದು ನಡೆದಿದೆ. 36 ವರ್ಷದ ಗೃಹಿಣಿ ಶೈಲಜಾ ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ.
ಶೈಲಜಾ ಒಂದೂವರೆ ವರ್ಷದ ಹಿಂದೆ ವೆಂಕಟೇಶ್ ಎಂಬುವವರನ್ನು ಎರಡನೇ ಮದುವೆಯಾಗಿದ್ದರು. ವೆಂಕಟೇಶ್ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಇಬ್ಬರೂ ವಿಚ್ಛೇದನ ನಂತರ ಹೊಸ ಜೀವನ ಆರಂಭಿಸಿದ್ದರು.
ಆದರೆ, ಮದುವೆಯ ನಂತರ ಮನೆಯಲ್ಲೇ ಸಮಸ್ಯೆಗಳು ಆರಂಭವಾಗಿದ್ದವು ಎಂಬ ಆರೋಪ ಕೇಳಿಬಂದಿದೆ. ವೆಂಕಟೇಶ್ ಕುಟುಂಬದವರು ಶೈಲಜಾಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಹಿಂಸೆಯನ್ನು ತಾಳಲಾರದೆ ಶೈಲಜಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಶೈಲಜಾ ಕುಟುಂಬ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯ ಸತ್ಯಾಸತ್ಯತೆ ತನಿಖೆಯಿಂದಲೇ ತಿಳಿದುಬರಬೇಕಿದೆ.
ಇದನ್ನೂ ಓದಿ : ಪತ್ರಕರ್ತರ ವಿರುದ್ಧ ಆಕ್ರೋಶ ಹೊರಹಾಕಿದ ಶಾಹೀನ್ ಅಫ್ರಿದಿ!



















