ಜಾರ್ಜಿಯಾ (ಅಮೆರಿಕ) : ಅಮೆರಿಕದ ಜಾರ್ಜಿಯಾದಲ್ಲಿ ಮಕ್ಕಳು ಮಾಡಿದ ಸಣ್ಣದೊಂದು ತಮಾಷೆ (Prank) ವಿಕೋಪಕ್ಕೆ ತಿರುಗಿ, ಶಾಲೆಯ ಅಚ್ಚುಮೆಚ್ಚಿನ ಶಿಕ್ಷಕರೊಬ್ಬರು ವಿದ್ಯಾರ್ಥಿಯ ವಾಹನದ ಅಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಗೇನ್ಸ್‌ವಿಲ್ಲೆಯ ನಾರ್ತ್ ಹಾಲ್ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ 40 ವರ್ಷದ ಜೇಸನ್ ಹ್ಯೂಸ್ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ. ಆಕಸ್ಮಿಕವಾಗಿ ನಡೆದ ಈ ಘಟನೆಯು ಇಡೀ ಸಮುದಾಯವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಅಮೆರಿಕದ ಹದಿಹರೆಯದವರಲ್ಲಿ ಜನಪ್ರಿಯವಾಗಿರುವ ‘ಟಿಪಿ ಪ್ರಾಂಕ್’ (ಮನೆ ಅಥವಾ ಮರಗಳಿಗೆ ಟಾಯ್ಲೆಟ್ ಪೇಪರ್ ಸುತ್ತುವುದು) ಮಾಡಲು ವಿದ್ಯಾರ್ಥಿಗಳ ಗುಂಪೊಂದು ಜೇಸನ್ ಹ್ಯೂಸ್ ಅವರ ಮನೆಗೆ ತಡರಾತ್ರಿ ತೆರಳಿತ್ತು. ವಿದ್ಯಾರ್ಥಿಗಳು ಹ್ಯೂಸ್ ಅವರ ಮನೆಯ ಮುಂದಿನ ಮರಗಳಿಗೆ ಪೇಪರ್ ಸುತ್ತುತ್ತಿರುವುದನ್ನು ಗಮನಿಸಿದ ಶಿಕ್ಷಕರು, ಅವರನ್ನು ಪ್ರಶ್ನಿಸಲು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಶಿಕ್ಷಕರನ್ನು ಕಂಡು ಗಾಬರಿಗೊಂಡ ವಿದ್ಯಾರ್ಥಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ರಸ್ತೆಯಲ್ಲೇ ಜಾರಿ ಬಿದ್ದ ಶಿಕ್ಷಕ; ಹರಿದ ಪಿಕಪ್ ಟ್ರಕ್
ವಿದ್ಯಾರ್ಥಿಗಳು ತಮ್ಮ ವಾಹನಗಳತ್ತ ಓಡುತ್ತಿದ್ದಾಗ, ಅವರನ್ನು ಹಿಂಬಾಲಿಸಿದ ಹ್ಯೂಸ್ ಆಕಸ್ಮಿಕವಾಗಿ ರಸ್ತೆಯ ಮೇಲೆ ಜಾರಿ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಅವರದ್ದೇ ವಿದ್ಯಾರ್ಥಿ 18 ವರ್ಷದ ಜೇಡನ್ ರಯಾನ್ ವ್ಯಾಲೇಸ್, ಶಿಕ್ಷಕನ ಕೈಯಿಂದ ತಪ್ಪಿಸಿಕೊಳ್ಳಲು ತನ್ನ ಪಿಕಪ್ ಟ್ರಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ರಸ್ತೆಯ ಮೇಲೆ ಬಿದ್ದಿದ್ದ ಹ್ಯೂಸ್ ಅವರ ಮೇಲೆ ವಾಹನ ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ನಾರ್ತ್‌ಈಸ್ಟ್ ಜಾರ್ಜಿಯಾ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹಾಲ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ವಿದ್ಯಾರ್ಥಿ ಮೇಲೆ ಹತ್ಯೆ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ವಾಹನ ಚಲಾಯಿಸುತ್ತಿದ್ದ ಜೇಡನ್ ವ್ಯಾಲೇಸ್ ಮೇಲೆ ಅಪಘಾತ ನಡೆಸಿ ಹತ್ಯೆ, ಅಜಾಗರೂಕ ಚಾಲನೆ ಮತ್ತು ಅತಿಕ್ರಮ ಪ್ರವೇಶದಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಇತರ ನಾಲ್ವರು ವಿದ್ಯಾರ್ಥಿಗಳ ಮೇಲೆಯೂ ಅತಿಕ್ರಮ ಪ್ರವೇಶ ಮತ್ತು ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಕಂಬನಿ ಮಿಡಿದ ಶಿಕ್ಷಣ ಲೋಕ; ಹರಿದು ಬಂದ ನೆರವು
ಜೇಸನ್ ಹ್ಯೂಸ್ ಅವರು ಕೇವಲ ಶಿಕ್ಷಕರಷ್ಟೇ ಅಲ್ಲದೆ, ಉತ್ತಮ ಮಾರ್ಗದರ್ಶಕ ಮತ್ತು ಕ್ರೀಡಾ ತರಬೇತುದಾರರಾಗಿಯೂ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಶಾಲಾ ಸಮುದಾಯ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಹ್ಯೂಸ್ ಅವರ ಪತ್ನಿ ಲಾರಾ ಕೂಡ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ನೆರವಾಗಲು ಸಮುದಾಯವು ಮುಂದಾಗಿದ್ದು, ‘GoFundMe’ ಅಭಿಯಾನದ ಮೂಲಕ ಈಗಾಗಲೇ 80,000 ಡಾಲರ್‌ಗೂ (ಸುಮಾರು 66 ಲಕ್ಷ ರೂ.) ಹೆಚ್ಚು ಹಣ ಸಂಗ್ರಹವಾಗಿದೆ.
ಇದನ್ನೂ ಓದಿ : ಮೆಟ್ಟಿಲು ಕುಸಿದು ಬಿದ್ದು ದಂಪತಿ ದಾರುಣ ಸಾವು!



















