ಆನೇಕಲ್: ಬೃಹತ್ ಕಂಟೈನರ್‌ವೊಂದು ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿರುವ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್‌ನಲ್ಲಿ ಸಂಭವಿಸಿದೆ.
ಪೊಲೀಸರಿಂದ 14 ಕಿಮೀ ತಪ್ಪಿಸಿಕೊಂಡು ಹೋಗಿದ್ದ ಲಾರಿ ಚಾಲಕನನ್ನು ಸಾರ್ವನಿಕರೇ ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ಮದ್ಯದ ಅಮಲಿನಲ್ಲಿದ್ದ ಎನ್ನುವುದು ಗೊತ್ತಾಗಿದೆ. ಬೆಸ್ತಮಾನಹಳ್ಳಿಯಿಂದ ಚಂದಾಪುರದ ಕಡೆಗೆ ಹೊರಟಿದ್ದ ಚಾಲಕ ರಸ್ತೆ ಅಕ್ಕಪಕ್ಕ ಸಿಕ್ಕಸಿಕ್ಕ ವಾಹನಗಳನ್ನೆಲ್ಲ ಗುದ್ದಿಕೊಂಡು ಹೋಗಿದ್ದಾನೆ.
ಪೊಲೀಸರು 14 ಕಿಮೀ ಚೇಸ್ ಮಾಡಿದರೂ ವಾಹನ ನಿಲ್ಲಿಸಿದೇ ಹೋಗಿದ್ದಾನೆ. ಕೊನೆಗೆ ಹೊಸೂರು ಹೆದ್ದಾರಿಯ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಿ ಲಾರಿ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸುತ್ತಿದ್ದಂತೆ ಚಾಲಕನನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ.
ಸದ್ಯ ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಸೂರ್ಯ ಸಿಟಿ ಪೋಲಿಸರು, ವಿಚಾರಣೆ ನಡೆಸುತ್ತಿದ್ದಾರೆ. ಸರಣಿ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: ಮೂಲ ಸೌಕರ್ಯಕ್ಕಾಗಿ ವಿದ್ಯಾರ್ಥಿನಿಯರ ಆಕ್ರೋಶ | ಬೆಂಗಳೂರು ವಿವಿ ಆವರಣದಲ್ಲಿ ಪ್ರೊಟೆಸ್ಟ್!



















