ಬೆಂಗಳೂರು | ಬೆಂಗಳೂರಿನಲ್ಲಿ ದಾರುಣ ಕೊಲೆ ನಡೆದಿದ್ದು, ಚಂದ್ರಾ ಲೇಔಟ್‌ನ ಗಂಗೊಂಡನಹಳ್ಳಿಯಲ್ಲಿ ಫೀರ್ದೋಸ್ ಭಾನು ಎಂಬ ವಿವಾಹಿತ ಮಹಿಳೆಯನ್ನು ಡ್ಯಾಗರ್‌ನಿಂದ ಇರಿದು ಹತ್ಯೆ ಮಾಡಲಾಗಿದೆ. ಹೊಟ್ಟೆ, ತೊಡೆ ಮತ್ತು ಕೈ ಭಾಗಗಳಲ್ಲಿ ಇರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪರಿಚಿತನಿಂದಲೇ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಫೀರ್ದೋಸ್ ಭಾನು ಅವರನ್ನು ಕೆಲ ತಿಂಗಳಿನಿಂದ ಅಫೀಸ್ ಎಂಬ ಯುವಕ ಹಿಂಬಾಲಿಸುತ್ತಿದ್ದನು. ಆಕೆಯೊಂದಿಗೆ ಪ್ರೀತಿಯಲ್ಲಿ ಇರಬೇಕೆಂದು ಒತ್ತಾಯಿಸುತ್ತಿದ್ದನು.
ಈ ಕುರಿತು ಫೀರ್ದೋಸ್ ಕಳೆದ ತಿಂಗಳು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಎಚ್ಚರಿಕೆ ನೀಡಿ, ಮತ್ತೆ ಹಿಂಬಾಲಿಸದಂತೆ ಬರೆಸಿಕೊಂಡಿದ್ದರು. ಆ ಬಳಿಕವೂ ಆತ ಆಕೆಯನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು ಎನ್ನಲಾಗಿದೆ.
ಆದರೆ, ಫೀರ್ದೋಸ್ ಆತನನ್ನು ಸಂಪೂರ್ಣವಾಗಿ ಅವೈಡ್ ಮಾಡುತ್ತಿದ್ದರು. ಇಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದರೂ, ಫೀರ್ದೋಸ್ ಎಲ್ಲಿ ಹೋಗುತ್ತಾಳೆ ಎಂಬ ಮಾಹಿತಿಯನ್ನು ಆರೋಪಿಯು ತಿಳಿದುಕೊಂಡಿದ್ದನು.
ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ, ಫೀರ್ದೋಸ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಅಫೀಸ್ ಹಿಂಬಾಲಿಸಿಕೊಂಡು ಬಂದಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ಉಂಟಾಗಿ, ಆಕ್ರೋಶಗೊಂಡ ಆರೋಪಿಯು ಡ್ಯಾಗರ್‌ನಿಂದ ಇರಿದು ಹತ್ಯೆಗೈದಿದ್ದಾನೆ.
ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಚಂದ್ರಾ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ : ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.. ಯಾವ ಸಿನಿಮಾ ಗೊತ್ತಾ?



















