ಚಿಕ್ಕಮಗಳೂರು : ಪತಿ ಮೃತಪಟ್ಟ ವಿಷಯವೇ ತಿಳಿಯದ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು, ಬರೋಬ್ಬರಿ 10 ದಿನಗಳ ಕಾಲ ಕೊಳೆತ ಶವದೊಂದಿಗೆಯೇ ವಾಸವಿದ್ದ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಾಫಿನಾಡಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬೆಳಕಿಗೆ ಬಂದಿದೆ.
ಕೊಟ್ಟಿಗೆಹಾರ ನಿವಾಸಿ ಸಿರಿಲ್ ಮೋನಿಸ್ (77) ಮೃತಪಟ್ಟ ದುರ್ದೈವಿ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಸುಮಾರು 10 ದಿನಗಳ ಹಿಂದೆಯೇ ಮಲಗಿದ್ದಲ್ಲಿಯೇ ಕೊನೆಯುಸಿರೆಳೆದಿದ್ದರು. ಆದರೆ ಮನೆಯಲ್ಲಿದ್ದ ಇವರ ಪತ್ನಿ ಮಾನಸಿಕ ಅಸ್ವಸ್ಥರಾಗಿದ್ದರಿಂದ, ಪತಿ ಮೃತಪಟ್ಟಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಅವರಿಗಿರಲಿಲ್ಲ. ಪತಿ ಗಾಢ ನಿದ್ರೆಯಲ್ಲಿದ್ದಾರೆ ಎಂದು ಭಾವಿಸಿದ್ದ ಅವರು, ಹತ್ತು ದಿನಗಳ ಕಾಲ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ, ಸಂಪೂರ್ಣವಾಗಿ ಕೊಳೆತು ಹೋಗಿದ್ದ ಶವದ ಪಕ್ಕದಲ್ಲೇ ಪತ್ನಿ ಕುಳಿತಿರುವುದು ಕಂಡುಬಂದಿದೆ.
ಮೃತ ಮೋನಿಸ್ ಅವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ಪ್ರತಿದಿನ ತಾಯಿಗೆ ಫೋನ್ ಮಾಡಿ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದನು. ಆದರೆ ಮಾನಸಿಕ ಅಸ್ವಸ್ಥತೆಯಲ್ಲಿದ್ದ ತಾಯಿ, ಪ್ರತಿ ಬಾರಿಯೂ “ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ” ಎಂದೇ ಉತ್ತರಿಸುತ್ತಿದ್ದರು. ತಾಯಿಯ ಮಾತನ್ನು ನಂಬಿದ್ದ ಮಗನಿಗೆ ತಂದೆಯ ಸಾವಿನ ಸುಳಿವೇ ಸಿಕ್ಕಿರಲಿಲ್ಲ. ಪ್ರಸ್ತುತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಸಂಭವಿಸಿದ ಈ ದುರಂತ ಇಡೀ ಜಿಲ್ಲೆಯನ್ನೇ ಕಂಗೆಡಿಸಿದೆ.
ಇದನ್ನೂ ಓದಿ : ವಿಧಾನಸಭೆ ಸಮರ : ಅಸ್ಸಾಂ, ಕೇರಳದಲ್ಲಿ ಬಿಜೆಪಿ-ಎಡರಂಗದ ಹ್ಯಾಟ್ರಿಕ್ ಕನಸು.. ಪುದುಚೇರಿಯಲ್ಲಿ ಮತ್ತೆ ಅಧಿಕಾರಕ್ಕೆ NDA ಕಸರತ್ತು!



















