ಚಿಕ್ಕಮಗಳೂರು | ನಿಂತಿದ್ದ ಬೋರ್ವೆಲ್ ಲಾರಿಗೆ ವೇಗವಾಗಿ ಬಂದ ಬೊಲೆರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಲಾರಿಗೆ ಜೀಪ್ ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬೊಲೆರೋ ಜೀಪ್‌ನಲ್ಲಿದ್ದ 7 ಜನರಲ್ಲಿ ಓರ್ವ ಸ್ಥಳದಲ್ಲೇ ಸಾವನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡ 6 ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕೂಡಲೇ ಸ್ಥಳೀಯರು ಗಾಯಾಳುಗಳನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆ ಮೆಗ್ಗಾನ್ಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿಯಿಂದ ಬೊಲೆರೋ ಜೀಪ್ನಲ್ಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ಕಲ್ಲತ್ತಿಗಿರಿಗೆ ಹೋಗಿದ್ದರು. ಕಲ್ಲತ್ತಿಗಿರಿಯಿಂದ ಎಂ.ಸಿ. ಹಳ್ಳಿಗೆ ವಾಪಸಾಗುವಾಗ ದಾರಿ ಮಧ್ಯೆ ಬೋರ್ವೆಲ್ ಕೊರೆಯುವ ಲಾರಿಗೆ ಬೊಲೆರೋ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಕುರಿತಾಗಿ ಕೂಡಲೇ ಸ್ಥಳೀಯರು ತರೀಕೆರೆ ಪೊಲೀಸರು ಹಾಗೂ ಲಿಂಗದಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಚಾರ ತಿಳಿದಕೂಡಲೇ ತರೀಕೆರೆ, ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಸಿಗ್ನಲ್ ತಪ್ಪಿಸಲು ಹೋಗಿ ಶಾಲಾ ಬಸ್‍ಗೆ ಕಾರು ಡಿಕ್ಕಿ.. ತಪ್ಪಿದ ದುರಂತ!



















