ಟೆಹ್ರಾನ್ : ಅಮೆರಿಕ-ಇರಾನ್ ಸಂಧಾನ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ಇರಾನ್ ಬಂದರುಗಳಿಗೆ ಅಮೆರಿಕ ಜಲ ದಿಗ್ಬಂಧನ ವಿಧಿಸಿದೆ. ಇದರ ನೇರ ಪರಿಣಾಮವಾಗಿ, ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಭಾರತದ ಕನಿಷ್ಠ 15 ವಾಣಿಜ್ಯ ಹಡಗುಗಳು ಸಿಲುಕಿಕೊಂಡಿವೆ.
ಅರೇಬಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯಲ್ಲಿರುವ ಇರಾನ್ ಬಂದರುಗಳ ಮೇಲೆ ಸೋಮವಾರದಿಂದಲೇ ಈ ನಿರ್ಬಂಧ ಜಾರಿಗೆ ಬರುವಂತೆ ಅಮೆರಿಕದ ಸೆಂಟ್ರಲ್ ಕಮಾಂಡ್ ಆದೇಶಿಸಿದ್ದು, ಪರಿಣಾಮವಾಗಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರದಲ್ಲಿ ಭಾರೀ ಕುಸಿತ ಉಂಟಾಗಿದೆ.
ರಕ್ಷಣೆಗೆ ನಿಂತ ಭಾರತೀಯ ನೌಕಾಪಡೆ
ಪ್ರಸ್ತುತ ಜಲಸಂಧಿಯ ಬಳಿ ಸಿಲುಕಿಕೊಂಡಿರುವ 15 ಹಡಗುಗಳ ಪೈಕಿ ಎಲ್‌ಎನ್‌ಜಿ (LNG) ಮತ್ತು ಎಲ್‌ಪಿಜಿ (LPG) ಸಾಗಣೆ ಹಡಗುಗಳು, ಕಚ್ಚಾ ತೈಲ ಟ್ಯಾಂಕರ್‌ಗಳು, ಕಂಟೇನರ್ ಹಡಗುಗಳು, ಡ್ರೆಡ್ಜರ್ ಹಾಗೂ ಕೆಮಿಕಲ್ ಟ್ಯಾಂಕರ್‌ಗಳು ಸೇರಿವೆ. ಈ ಬಿಕ್ಕಟ್ಟಿನ ನಡುವೆಯೂ ಭಾರತೀಯ ನೌಕಾಪಡೆಯು ವಾಣಿಜ್ಯ ಹಡಗುಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದೆ.
ಪರ್ಷಿಯನ್ ಕೊಲ್ಲಿಯಲ್ಲಿ ಬೀಡುಬಿಟ್ಟಿರುವ ನೌಕಾಪಡೆಯ ಆರು ಹಡಗುಗಳು ಸಂವಹನ, ಕಣ್ಗಾವಲು ಮತ್ತು ಸುರಕ್ಷಿತ ಸಂಚಾರಕ್ಕೆ ಬೆಂಗಾವಲಾಗಿ ನಿಂತಿವೆ. ಬಿಕ್ಕಟ್ಟು ತೀವ್ರಗೊಂಡಿದ್ದರೂ, ನೌಕಾಪಡೆಯ ಕಾರ್ಯಾಚರಣೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಡಲ ಭದ್ರತಾ ಸಂಸ್ಥೆಗಳ ಪ್ರಕಾರ, ಒಟ್ಟಾರೆ 25 ಹಡಗುಗಳ ಪೈಕಿ 10 ಹಡಗುಗಳು ಈಗಾಗಲೇ ಸುರಕ್ಷಿತವಾಗಿ ಈ ಮಾರ್ಗವನ್ನು ದಾಟಿವೆ. ಅಲ್ಲದೆ, ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರ ಖಚಿತಪಡಿಸಲು ಭಾರತವು 28 ದೇಶಗಳೊಂದಿಗೆ ನೈಜ-ಸಮಯದ ಕಡಲ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ.
ಸುರಕ್ಷಿತವಾಗಿ ಮುಂಬೈಯತ್ತ ‘ಜಗ್ ವಿಕ್ರಮ್’
ಈ ಉದ್ವಿಗ್ನತೆಯ ನಡುವೆಯೇ, ಏಪ್ರಿಲ್ 11ರಂದು ಹೊರ್ಮುಜ್ ಜಲಸಂಧಿ ದಾಟಿದ ಎಲ್‌ಪಿಜಿ ಟ್ಯಾಂಕರ್ ‘ಜಗ್ ವಿಕ್ರಮ್’ ಪ್ರಸ್ತುತ ಭಾರತೀಯ ನೌಕಾಪಡೆಯ ಬೆಂಗಾವಲಿನಲ್ಲಿ ಅರಬ್ಬಿ ಸಮುದ್ರದ ಮೂಲಕ ಮುಂಬೈಯತ್ತ ಸಾಗುತ್ತಿದೆ. 24 ಸಿಬ್ಬಂದಿಯನ್ನು ಒಳಗೊಂಡಿರುವ ಈ ಹಡಗು 20400 ಟನ್ ಎಲ್‌ಪಿಜಿ ಹೊತ್ತು ತರುತ್ತಿದ್ದು, ಏಪ್ರಿಲ್ 15ರಂದು ಮುಂಬೈ ತಲುಪುವ ನಿರೀಕ್ಷೆಯಿದೆ. ವಿಶ್ವದ ಶೇ.28ರಷ್ಟು ಕಚ್ಚಾ ತೈಲ ಸಾಗಣೆಯಾಗುವ ಈ ಮಾರ್ಗದಲ್ಲಿ ಎದುರಾಗಿರುವ ಅಡೆತಡೆಯು ಜಾಗತಿಕ ಇಂಧನ ಪೂರೈಕೆ, ಸರಕು ಸಾಗಣೆ ಹಾಗೂ ವಿಮೆಗಳ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ. ಇತ್ತೀಚಿನ ವಾರಗಳಲ್ಲಿ ಈ ವಿಸ್ತೃತ ಕೊಲ್ಲಿ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಅಹಿತಕರ ಘಟನೆಗಳು ವರದಿಯಾಗಿದ್ದು, 23 ಹಡಗುಗಳನ್ನು ಗುರಿಯಾಗಿಸಲಾಗಿದೆ ಎಂದು ಭದ್ರತಾ ಏಜೆನ್ಸಿಗಳು ಎಚ್ಚರಿಸಿವೆ.
ಟ್ರಂಪ್ ಬೆದರಿಕೆಗೆ ಬಗ್ಗುವುದಿಲ್ಲ ಎಂದ ಇರಾನ್
ಅಮೆರಿಕದ ಕಠಿಣ ನಿಲುವಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್, ಜಲಮಾರ್ಗವನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನಕ್ಕೂ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಸಿದೆ. ಇರಾನ್ ಸೇನಾ ಸಲಹೆಗಾರ ಹಾಗೂ ಮಾಜಿ ಕಮಾಂಡರ್ ಮೊಹ್ಸಿನ್ ರೆಜಾಯಿ ಈ ಕುರಿತು ಪ್ರತಿಕ್ರಿಯಿಸಿದ್ದು, “ಹೊರ್ಮುಜ್ ದಿಗ್ಬಂಧನವನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳ ಬಳಿ ಇನ್ನೂ ಬಳಸದ ಪ್ರಬಲ ಅಸ್ತ್ರಗಳಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್‌ಗಳು ಮತ್ತು ಕಾಲ್ಪನಿಕ ಯೋಜನೆಗಳಿಗೆ ಇರಾನ್ ಎಂದಿಗೂ ಮಣಿಯುವುದಿಲ್ಲ” ಎಂದು ನೇರ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ಲಂಚ ಪಡೆಯುತ್ತಿದ್ದಾಗಲೇ ‘ಲೋಕಾ’ ಬಲೆಗೆ ಬಿದ್ದ RTO ಅಧಿಕಾರಿಗಳು!



















