ಕಲಬುರ್ಗಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೊಬ್ಬ ಮಗಳನ್ನೇ ಕೊಂದು ಹಾಕಿರುವ ಧಾರುಣ ಘಟನೆ ಕಲಬುರಗಿ ಜಿಲ್ಲೆಯ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ.
ಕವಿತಾ ಕೊಳ್ಳೂರ (18) ಮರ್ಯಾದಾ ಹತ್ಯೆಗೆ ಬಲಿಯಾದ ದುರ್ದೈವಿ.
ಮಗಳು ಕವಿತಾ, ಮೇಳಕುಂದಾ ಗ್ರಾಮದ ಆಟೋ ಡ್ರೈವರ್ ನನ್ನು ಪ್ರೀತಿಸುತ್ತಿದ್ದಳು. ಆತನೂ ಕೂಡ ಕವಿತಾಳನ್ನು ಪ್ರೀತಿಸುತ್ತಿದ್ದ, ಇಬ್ಬರೂ ಮದುವೆಯಾಗುವುದರಲ್ಲಿದ್ದರು. ಅನ್ಯ ಜಾತಿ ಯುವಕನೊಂದಿಗಿನ ಮಗಳ ಪ್ರೀತಿಯ ವಿಚಾರ ತಿಳಿದು ಕವಿತಾಳ ಹೆತ್ತವರ ಆಕ್ರೋಶಗೊಂಡಿದ್ದರು.
ಬಳಿಕ ಮಗಳಿಗೆ ಬುದ್ದಿ ಹೇಳಿ ಸರಿ ದಾರಿಗೆ ತರಲು ನೋಡಿದ್ದಾರೆ. ಆಕೆ ಪ್ರೀತಿಸಿದ ಹುಡುಗನ ಬಿಟ್ಟುಕೊಡಲು ಒಪ್ಪದಿದ್ದಾಗ, ಹೆತ್ತ ತಂದೆ ಶಂಕರ ಕೊಳ್ಳೂರ ಹಾಗೂ ಕವಿತಾಳ ಸಹೋದರ ಸಂಬಂಧಿ ಶರಣಪ್ಪ ಕೊಳ್ಳೂರ ಹಾಗೂ ದತ್ತಪ್ಪ ಎನ್ನುವವರು ಯುವತಿಯ ಮೇಲೆ ಹಲ್ಲೆ ಮಾಡಿ ಕೊನೆಗೆ ಕವಿತಾಳನ್ನು ಕತ್ತು ಹಿಸುಕಿ ಕೊಂದು ಹಾಕಿದ್ದಾರೆ.
ಕೊಲೆಯ ನಂತರ ಕುಟುಂಬಸ್ಥರು, ಶವದ ಬಾಯಿಗೆ ಕ್ರಿಮಿನಾಶಕ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರ ಮುಂದೆ ಬಿಂಬಿಸಿ ಆತುರಾತುರವಾಗಿ ತಮ್ಮದೇ ಹೊಲದಲ್ಲಿ ಶವವನ್ನು ಸುಟ್ಟು ಹಾಕಿದ್ದಾರೆ.
ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.