ವಿಜಯಪುರ: ಮರ್ಯಾದೆ ಹತ್ಯೆಗೈದ ಇಬ್ಬರು ಸಹೋದರರಿಗೆ ಮರಣದಂಡನೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆಯನ್ನು ಕಲಬುರಗಿಯ ಹೈಕೋರ್ಟ್ ದ್ವಿ ಸದಸ್ಯ ಪೀಠದಿಂದ ಐತಿಹಾಸಿಕ ತೀರ್ಪು ಹೊರಬಂದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದ ಇಬ್ರಾಹಿಂ ಸಾಬ್ (31) ಹಾಗೂ ಈತನ ಸಹೋದರ ಲಾರಿ ಚಾಲಕ ಅಕ್ಬರ್ (28) ಮರಣ ದಂಡನೆ ಶಿಕ್ಷೆಗೆ ಒಳಗಾದ ಸಹೋದರರು.
2017 ರಲ್ಲಿ ಸಾಯಿಬಣ್ಣ ಎನ್ನುವ ದಲಿತ ಯುವಕನ ಜೊತೆ ಬಾನು ಬೇಗಂ ಪ್ರೀತಿಸಿ ಮದುವೆಯಾಗಿದ್ದಳು.ಮನೆಯ ಮರ್ಯಾದೆ ತೆಗೆದಿದ್ದಾಳೆ ಎಂಬ ಕಾರಣಕ್ಕಾಗಿ ಬಾನು ಬೇಗಂ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಸಂರ್ಭದಲ್ಲಿ ಬೆಂಕಿ ಹಚ್ಚಿ ಸಜೀವವಾಗಿ ಕೊಂದು ಹಾಕಿದ್ದರು.
ಈ ಮೊದಲು ವಿಚಾರಣೆ ನಡೆಸಿದ್ದ ವಿಜಯಪುರ ಜಿಲ್ಲಾ ಕೋರ್ಟ್ ಈ ಇಬ್ಬರು ಸಹೋದರರಿಗೆ ಮರಣದಂಡನ ಶಿಕ್ಷೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಈ ತೀರ್ಪುನ್ನು ಮಾನ್ಯ ಮಾಡಿದೆ. ಕೊಲೆಯಾದ ಬಾನು ಬೇಗಂನ ತಾಯಿ ಹಾಗೂ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.